ವಾಷಿಂಗ್ಟನ್: ಇಸಿಸ್ ಮುಖ್ಯಸ್ಥ ಬಾಗ್ದಾದಿ ಹತ್ಯೆ ಮಾಡಿರುವ ಅಮೆರಿಕಾ ಮೇಲೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಇರಾನ್ ಉಗ್ರ ಸಂಘಟನೆ ಸೇಡು ತೀರಿಸಿಕೊಳ್ಳುವ ಬೆದರಿಕೆಯನ್ನು ಅಮೆರಿಕಾಗೆ ನೀಡಿದೆ.
ಈ ಕುರಿತು ಆಡಿಯೋ ಟೇಪ್ ವೊಂದನ್ನು ಬಿಡುಗಡೆ ಮಾಡಿರುವ ಇಸಿಸ್, ಬಾಗ್ದಾದಿ ಮೃತಪಟ್ಟಿರುವುದು ನಿಜ. ಆತನ ಉತ್ತರಾಧಿಕಾರಿಯಾಗಿ ಅಬು ಇಬ್ರಾಹಂ ಅಲ್ ಹಷಿಮಿ ಅಲ್ ಖುರೇಶಿಯನ್ನು ನೇಮಿಸಲಾಗಿದ್ದು, ನಮ್ಮ ಬಾಹುಳ್ಯವನ್ನು ಮತ್ತಷ್ಟು ವಿಸ್ತರಿಸುತ್ತೇವೆಂದು ಹೇಳಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಳೆಯ ಮೂರ್ಖನೆಂದು ಕರೆದಿರುವ ಇಸಿಸ್, ಹೆಚ್ಚು ಹಿಗ್ಗಬೇಡ ಅಮೆರಿಕಾ, ಶೀಘ್ರದಲ್ಲಿಯೇ ನಾವು ನಮ್ಮ ಸೇಡು ತೀರಿಸಿಕೊಳ್ಳುತ್ತೇವೆ. ಇತರೆ ರಾಷ್ಟ್ರಗಳ ಎದುರು ಹೇಗೆ ನಗಪಾಟಲಿಗೆ ಈಡಾಗಿದ್ದೀರಿ ಎಂಬುದನ್ನು ನೀವು ನೋಡುತ್ತಿಲ್ಲ. ನಿಮ್ಮ ಹಣೆಬರಹವು ವಯಸ್ಸಾದ ಮೂರ್ಖನಿಂದ ಆಳಲ್ಪಡುತ್ತಿದೆ. ಒಂದು ಅಭಿಪ್ರಾಯದಿಂದ ನಿದ್ರೆಗೆ ಜಾರುತ್ತಾರೆ. ಮತ್ತೊಬ್ಬರೊಂದಿಗೆ ಎಚ್ಚರಗೊಳ್ಳುತ್ತಾರೆ. ಈಗಾಗಲೇ ಮತ್ತೊಬ್ಬ ಮುಖ್ಯಸ್ಥರನ್ನು ನೇಮಕ ಮಾಡಲಾಗಿದ್ದು, ನೂತನ ಮುಖ್ಯಸ್ಥ ಸೇಡು ತೀರಿಸಿಕೊಳ್ಳಲಿದ್ದಾರೆ. ಬಾಗ್ದಾದಿ ಇದ್ದ ದಿನಗಳ ಸಾಧನೆಗಳನ್ನು ಸಿಹಿ ಮಾಡಲಿದ್ದಾರೆ ತಿಳಿಸಿದೆ. ಬಾಗ್ದಾದಿ ಅಂತ್ಯದ ಬಳಿಕ ವಿಶ್ವದ ಅತ್ಯಂತ ಕ್ರೂರ ಮತ್ತು ನಿರ್ದಯಿ ಉಗ್ರಗಾಮಿ ಸಂಘಟನೆಯಾಗಿರುವ ಇಸಿಸ್'ಗೆ ವಿಧ್ವಂಸಕ ಎಂದೇ ಕುಖ್ಯಾತಿಗಳಿಸಿರುವ ಅಬ್ದುಲ್ಲಾ ಖರ್ದಾಶ್ ನೂತನ ನಾಯಕನಾಗಿ ನೇಮಕಗೊಂಡಿದ್ದಾನೆಂದು ತಿಳಿದುಬಂದಿದೆ. ಅಮೆರಿಕಾ ಸೇನಾಪಡೆಗಳ ದಾಳಿಯಲ್ಲಿ ಹತನಾದ ಬಾಗ್ದಾದಿ ಪರಮಾಪ್ತನಾದ ಈತ ಈ ಹಿಂದೆ ಇರಾಕ್ ಸರ್ವಾಧಿಕಾರಿ ಸದ್ಧಾಮ್ ಹುಸೇನ್ ಆಪ್ತ ವಲಯದ ಸೇನೆಯಲ್ಲಿ ಉನ್ನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ತನ್ನ ಶತ್ರುಗಳನ್ನು ನಿಗ್ರಹಿಸಲು ಸದ್ದಾಮ್ ಬಳಸುತ್ತಿದ್ದ ವಿಶೇಷ ಸೇನೆಯ ತಂಡದಲ್ಲಿದ್ದ ಈತನನ್ನು ಡಿಸ್ಟ್ರಾಯರ್ (ವಿಧ್ವಂಸಕ) ಎಂದೇ ಗುರ್ತಿಸಲಾಗುತ್ತಿತ್ತು.
ಬಾಗ್ದಾದಿ ಹತ್ಯೆಯಾದ ಬಳಿಕ ಖರ್ದಾಶ್ ಅಧಿಕೃತವಾಗಿ ಇಸಿಸ್ ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ಹಿಂದೆಯೂ ಕೂಡ ಬಾಗ್ದಾದಿ ಅನುಪಸ್ಥಿತಿಯಲ್ಲಿ ಅಬ್ದುಲ್ಲಾ ಮಹತ್ವದ ಕಾರ್ಯಾಚರಣೆಗಳ ಹೊಣೆ ಹೊತ್ತು ಯಶಸ್ವಿಯಾಗಿ ನಿಭಾಯಿಸಿದ್ದ ಅಮೆರಿಕಾ ಪಡೆಗಳು ಮತ್ತು ಇಸಿಸ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಇತರ ರಾಷ್ಟ್ರಗಳ ವಿರುದ್ಧ ಸದಾ ಕತ್ತಿ ಮಸೆಯುವ ಅಬ್ದುಲ್ಲಾ, ಬಾಗ್ದಾದಿಯಷ್ಟೇ ಕುತಂತದ್ರಿ ಮತ್ತು ಕ್ರೂರಿಯಾಗಿದ್ದಾನೆಂದು ಬಣ್ಣಿಸಲಾಗುತ್ತಿದೆ.
ಈತ ಅಲ್ ಖೈದಾ ಮತ್ತು ಇಸಿಸ್ ಎರಡಲ್ಲೂ ಅನುಭವ ಹೊಂದಿರುವುದರಿಂದ ಈತನೇ ತನ್ನ ಮುಂದಿನ ನಾಯಕ ಎಂದು ಬಾಗ್ದಾದಿ ತನ್ನ ಆಪ್ತ ವಲಯದಲ್ಲಿ ಕೆಲವೊಮ್ಮೆ ಬಹಿರಂಗವಾಗಿ ಘೋಷಿಸಿದ್ದ. 2003ರಲ್ಲಿ ಅಲ್ ಖೈದಾ ಜೊತೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಾಗ್ದಾದಿ ಮತ್ತು ಅಬ್ದುಲ್ಲಾ ಅವರನ್ನು ಅಮೆರಿಕಾ ಸೇನೆ ಬಂಧಿಸಿ ಇರಾಕ್'ನ ಬಸ್ತಾ ಬಂಧೀಕಾನೆಯಲ್ಲಿ ಇರಿಸಲಾಗಿತ್ತು. ಈ ಸಂದರ್ಭ ಬಾಗ್ದಾದಿಯ ವಿಶ್ವಾಸ ಗಳಿಸಿದ್ದ ಅಬ್ದುಲ್ಲಾ ನಂತರ ಇಸಿಸ್ ಸಕ್ರಿಯ ಸದಸ್ಯನಾಗಿ ತನ್ನ ಕ್ರೂರ ಮತ್ತು ನಿರ್ದಯ ಹಿಂಸಾಕೃತ್ಯಗಳಿಂದ ಹಂತ ಹಂತವಾಗಿ ಬಡ್ತಿ ಪಡೆದು ಬಾಗ್ದಾದಿ ಬಲಗೈ ಬಂಟನಾಗಿದ್ದ. ಈಗ ಮತ್ತೊಬ್ಬ ನರರೂಪದ ರಾಕ್ಷಸ ಇಸಿಸ್ ಮುಖ್ಯಸ್ಥನಾಗಿರುವುದು ಅಮೆರಿಕಾಗೆ ತಲೆನೋವಾಗಿ ಪರಿಣಮಿಸಿದೆ.