ಬದಿಯಡ್ಕ: ದೇವರಗುಡ್ಡೆ ಶ್ರೀ ಸೈಲ ಮಹಾದೇವ ದೇವಸ್ಥಾನದಲ್ಲಿ 2020 ಫೆಬ್ರವರಿ 26ರಿಂದ ಮಾರ್ಚ್ 2ರ ತನಕ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಅರ್ಪಿಸಲಿರುವ ಹವಿಸ್ಸು ಭತ್ತದ ಕೊಯ್ಲು ಉತ್ಸವವು ಬೇಳ ಚೌಕ್ಕಾರು ಕರ್ಪಿತ್ತಿಲು ಅರಿಕ್ಕೆಲ್ ಮರಾಟಿಕೆರೆಯಲ್ಲಿ ಗುರುವಾರ ಜರಗಿತು.
ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯ ವಿಷ್ಣು ಅಸ್ರರವರ ಆಶೀರ್ವಾದಗಳೊಂದಿಗೆ ಕೊಯ್ಲು ಪ್ರಾರಂಭಿಸಲಾಯಿತು. ಸಮಾರಂಭದಲ್ಲಿ ಕೃಷಿ ಸಮಿತಿಯ ಪದಾಧಿಕಾರಿಗಳಾದ ಜಯದೇವ ಖಂಡಿಗೆ, ರಾಮ ಪಾಟಾಳಿ, ರಾಮಕೃಷ್ಣ ಹೆಬ್ಬಾರ, ಡಾ.ಜಯಪ್ರಕಾಶ ನಾಯಕ್, ಮೋಹನ ನಾಯಕ್, ಮೊಳೆಯಾರು ಕೃಷ್ಣ ಮಣಿಯಾಣಿ, ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಶಂಕರ ಡಿ., ದೂಮಣ್ಣ ರೈ, ಜಗನ್ನಾಥ ರೈ ಮರಾಠಿಕೆರೆ, ಮೋಹನದಾಸ ರೈ ಮರಾಟಿಕೆರೆ, ಮಾಜಿ ಬ್ಲಾಕ್ ಪಂಚಾಯತಿ ಸದಸ್ಯೆ ರತ್ನಾವತಿ, ಹಿರಿಯ ಕೃಷಿಕ ತಿಮ್ಮಪ್ಪ ಪಾಟಾಳಿ ಚೌಕಾರು, ಸೂರ್ಯಪ್ರಕಾಶ್, ಶಿವಶಂಕರ ಚೌಕಾರು, ಧರ್ಮಸ್ಥಳ ಸ್ವಸಹಾಯ ಸಂಘ ಮತ್ತು ಕುಟುಂಬಶ್ರೀ ಸದಸ್ಯೆಯರು, ದೇವರಗುಡ್ಡೆ ಶ್ರೀ ಶೈಲ ಮಹಾದೇವಸ್ಥಾನದ ಟ್ರಸ್ಟಿಗಳು ಹಾಗೂ ಅತಿರುದ್ರ ಮಹಾಯಾಗ ಸಮಿತಿಯ ಮತ್ತು ಮಹಿಳಾ ಮಂಡಳಿಯ ಸದಸ್ಯರು ಹಾಗೂ ಊರ ಭಗವದ್ಭಕ್ತರು ಪಾಲ್ಗೊಂಡಿದ್ದರು.
ದೂಮಣ್ಣ ರೈಯವರ ಗದ್ದೆಯಲ್ಲಿ ಕಳೆದ ಆ. ತಿಂಗಳಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ಅತಿರುದ್ರ ಮಹಾಯಾಗಕ್ಕೆ ಯಾಗದ ಹವಿಸ್ಸು ಭತ್ತ ಕೃಷಿ ನಾಟಿ ಮಹೋತ್ಸವವನ್ನು ನೇಜಿ ನೆಡುವ ಮೂಲಕ ಹಮ್ಮಿಕೊಳ್ಳಲಾಗಿತ್ತು. ಯಾಗದ ಸಿದ್ಧತೆಗಾಗಿ ನೀರ್ಚಾಲು ಸಮಿತಿಯ ನೇತೃತ್ವದಲ್ಲಿ ಹವಿಸ್ಸಿಗಾಗಿರುವ ಭತ್ತದ ಕೃಷಿಯನ್ನು ಮಾಡಲಾಗಿತ್ತು. ಇದೇ ರೀತಿ ಯಾಗದ ಹವಿಸ್ಸಿಗೆ ಅಗತ್ಯವಿರುವ ಎಲ್ಲಾ ಸಾಮಾಗ್ರಿಗಳನ್ನು ಪ್ರಕೃತಿ ಸಹಜವಾಗಿ ಲಭ್ಯವಾಗುವಂತೆ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.