ಕಾಸರಗೋಡು: ಸಂವಿಧಾನಬದ್ಧವಾಗಿ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರಿಗೆ ಹಲವು ಸವಲತ್ತುಗಳನ್ನು ನೀಡಿದ್ದರೂ ಎಲ್ಲಾ ಸವಲತ್ತುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸಂವಿಧಾನಬದ್ಧ ಹಕ್ಕುಗಳ ಸಂರಕ್ಷಣೆ ಹಾಗು ಕನ್ನಡ ಭಾಷೆ, ಸಂಸ್ಕøತಿಯ ರಕ್ಷಣೆಗೆ ನಿರಂತರ ಹೋರಾಟ ಅನಿವಾರ್ಯವಾಗಿದೆ. ಆಡಳಿತ ಹಿತದೃಷ್ಟಿಯಿಂದ ರಾಜ್ಯ ಪುನರ್ವಿಂಗಡಣೆಯ ಸಂದರ್ಭದಲ್ಲಿ ಅನ್ಯಾಯವಾಗಿ ಕಾಸರಗೋಡು ಕೇರಳಕ್ಕೆ ಸೇರ್ಪಡೆಗೊಂಡ ವರ್ಷದಿಂದ ವರ್ಷಕ್ಕೆ ಕನ್ನಡ ಉಸಿರು ಕ್ಷೀಣಿಸುತ್ತಿದ್ದು, ಕನ್ನಡ ಭಾಷೆ, ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕಿದ್ದರೆ ರಚನಾತ್ಮಕ ಮತ್ತು ನಿರಂತರ ಕನ್ನಡ ಕಾರ್ಯಕ್ರಮಗಳು ನಡೆಸಬೇಕಾಗಿದೆ ಎಂದು ಹಿರಿಯ ರಂಗನಟ, ಸಮಾಜ ಸೇವಕ ರಘು ಮೀಪುಗುರಿ ಅವರು ಹೇಳಿದರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಮತ್ತು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಜಂಟಿ ಆಶ್ರಯದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಲು ಹಿರಿಯರು ನಿರಂತರವಾಗಿ ಹೋರಾಟವನ್ನು ನಡೆಸುತ್ತಲೇ ಬಂದಿದ್ದಾರೆ. ಆದರೆ ಇದೀಗ ಕನ್ನಡ ಕ್ಷೀಣಿಸುತ್ತಿದೆ ಎಂಬುದು ವಾಸ್ತವ ಸತ್ಯ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಉಳಿಸಿ ಬೆಳೆಸಲು ಯುವ ತಲೆಮಾರಿನ ಮಕ್ಕಳಲ್ಲಿ ಕನ್ನಡ ಜಾಗೃತಿಯನ್ನು ಮೂಡಿಸಿ ಕನ್ನಡವನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ. ಮಹಾಜನ ವರದಿ ಜಾರಿಯಾಗಬೇಕೆಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಹೋರಾಟ ನಡೆಯಬೇಕು. ಕಾಸರಗೋಡಿನಲ್ಲಿ ಕನ್ನಡದ ಕೆಲಸ ಯಾರೇ ಮಾಡಿದರು ಸ್ವಾಗತಿಸಬೇಕೆಂದರು. ಯಾವುದೇ ರೀತಿಯಲ್ಲೂ ಕನ್ನಡದ ಕೆಲಸ ಮಾಡಿದರೂ ಎಲ್ಲರ ಉದ್ದೇಶ ಒಂದೇ. ಅದು ಮಹಾಜನ ವರದಿ ಜಾರಿಯಾಗಬೇಕೆಂಬುದಾಗಿದೆ ಎಂದರು.
ಕೇರಳ ಸರಕಾರ ನಿರಂತರವಾಗಿ ಕನ್ನಡ ಭಾಷೆ, ಸಂಸ್ಕøತಿಯ ಸರ್ವನಾಶಕ್ಕೆ ವಿವಿಧ ತಂತ್ರಗಳನ್ನು ಹೆಣೆಯುತ್ತಲೇ ಇದ್ದು, ಇತ್ತೀಚೆಗೆ ಕೆಲವು ದಿನಗಳಿಂದ ಪಿಎಸ್‍ಸಿಯಲ್ಲಿ ವಂಚನೆ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಅರಿಯದ ಮಲಯಾಳ ಅಧ್ಯಾಪಕರ ನೇಮಕ ಮಾಡುತ್ತಿದೆ. ಈ ಮೂಲಕ ಕನ್ನಡದ ಸರ್ವನಾಶವನ್ನು ಎದುರು ನೋಡುತ್ತಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಕಾಸರಗೋಡಿನ ಕನ್ನಡಿಗರಿಗೆ ಹೋರಾಟವೇ ಜೀವನವಾಗಿದೆ. ಕನ್ನಡ ಭಾಷೆ, ಸಂಸ್ಕøತಿಯನ್ನು ಉಳಿಸಲು ಕಾಸರಗೋಡಿನ ಕನ್ನಡಿಗರು ಒಗ್ಗಟ್ಟಿನ ಹೋರಾಟ ನಡೆಸಬೇಕಾಗಿದೆ ಎಂದು ಹಿರಿಯ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ, ಅಧ್ಯಾಪಕ ವಿನೋದ್ ಮಾಸ್ಟರ್, ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಕಾಸರಗೋಡು ಮೊದಲಾದವರು ಮಾತನಾಡಿದರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ದಯಾನಂದ ಬೆಳ್ಳೂರಡ್ಕ, ಮುರಳಿ ಪಾರೆಕಟ್ಟೆ, ಕುಶಲ ಪಾರೆಕಟ್ಟೆ ಮೊದಲಾದವರು
ಉಪಸ್ಥಿತರಿದ್ದರು. ಕಾವ್ಯ ಕುಶಲ ವಂದಿಸಿದರು. ಕನ್ನಡ ಪ್ರತಿಜ್ಞೆಯನ್ನು ದಿವಾಕರ ಅಶೋಕ್‍ನಗರ ಬೋಧಿಸಿದರು. ಕಾರ್ಯಕ್ರಮದಲ್ಲಿ ಜಯಾನಂದ ಕುಮಾರ್, ಕೃಪಾನಿಧಿ, ದಿವಾಕರ ಅಶೋಕನಗರ, ಕಾವ್ಯ ಕುಶಲ ಅವರಿಂದ ಕನ್ನಡ ಹಾಡು ಗಾಯನ ನಡೆಯಿತು.
ಕನ್ನಡ ಅಕಾಡೆಮಿ ಸ್ಧಾಪಿಸಲು ಆಗ್ರಹ : ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕøತಿಯನ್ನು ಉಳಿಸಲು ಕೇರಳ ಸರಕಾರ ಕನ್ನಡ ಅಕಾಡೆಮಿಯನ್ನು ಸ್ಥಾಪಿಸಬೇಕೆಂದು ಕಾರ್ಯಕ್ರಮದಲ್ಲಿ ಶಿವರಾಮ ಕಾಸರಗೋಡು ಪ್ರಸ್ತಾಪಿಸಿದರು. ಗುರುಪ್ರಸಾದ್ ಕೋಟೆಕಣಿ ಈ ಬೇಡಿಕೆಯನ್ನು ಅನುಮೋದಿಸಿದರು. ಈ ಬಗ್ಗೆ ಸರಕಾರಕ್ಕೆ ಮನವಿಯನ್ನು ಸಲ್ಲಿಸಲು ತೀರ್ಮಾನಿಸಲಾಯಿತು.