ನವದೆಹಲಿ: ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ(ಸಿಜೆಐ) ಕಚೇರಿ ಸಹ ಮಾಹಿತಿ ಹಕ್ಕು ಕಾಯಿದೆ(ಆರ್ ಟಿಐ) ಅಡಿ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಮತ್ತೊಂದು ಮಹತ್ವದ ತೀರ್ಪು ನೀಡಿದೆ.
೨೦೧೦ರಲ್ಲಿಯೇ ಸುಪ್ರೀಂಕೋರ್ಟ್ ಸಾರ್ವಜನಿಕ ಉತ್ತರದಾಯಿತ್ವ ಹೊಂದಿದ್ದು, ಸಿಜೆಐ ಕಚೇರಿ ಕೂಡಾ ಆರ್ ಟಿಐ ಕಾಯ್ದೆಯಡಿ ಬರಬೇಕಾಗಿದೆ ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಎತ್ತಿ ಹಿಡಿದಿದೆ. ಆದರೆ ಕೆಲವು ಷರತ್ತುಗಳೊಂದಿಗೆ ಸಿಜೆಐ ಕಚೇರಿ ಆರ್ ಟಿಐ ವ್ಯಾಪ್ತಿಗೆ ಒಳಪಡುತ್ತದೆ ಎಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ತೀರ್ಪು ನೀಡಿದೆ. ದೆಹಲಿ ಹೈಕೋರ್ಟ್ ತೀರ್ಪು ನ್ಯಾಯಾಂಗ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್ ಪ್ರಧಾನ ಕಾರ್ಯದರ್ಶಿ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು.
ಕೇಂದ್ರ ಸರ್ಕಾರ ಅಕ್ಟೊಬರ್ ೧೨, ೨೦೦೫ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯಿದೆಯ ಮೂಲ ಉದ್ದೇಶ. ದೇಶದ ಎಲ್ಲಾ ರಾಜ್ಯಗಳಲ್ಲಿ ಆರ್ ಟಿಐ ಕಾಯಿದೆ ಅನ್ವಯವಾಗುತ್ತದೆಯಾದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ ಟಿಐ ಬಳಸಲು ಅವಕಾಶವಿರಲಿಲ್ಲ.