HEALTH TIPS

ಫಡ್ನವಿಸ್ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್: ಇಂದಿಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

     
       ನವದೆಹಲಿ: ರಾಷ್ಟ್ರಪತಿ ಆಡಳಿತ ಹಿಂತೆಗೆದುಕೊಂಡು ತರಾತುರಿಯಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಿದ್ದು ಹಾಗೂ ಕುದುರೆ ವ್ಯಾಪಾರ ತಡೆಯಲು ಕೂಡಲೇ ಬಹುಮತ ಸಾಬೀತಿಗೆ ಆದೇಶ ಕೊಡಬೇಕೆಂದು ಕೋರಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಭಾನುವಾರ ಕೈಗೆತ್ತಿಕೊಂಡಿತು.
    ನಿನ್ನೆ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ರಾಜ್ಯಪಾಲರಿಗೆ ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ಸಂಬಂಧಿಸಿದ ದಾಖಲೆಗಳು ಮತ್ತು ಅವುಗಳಿಗೆ ಪೂರಕವಾದ ಪತ್ರಗಳನ್ನು ಇಂದು  ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದೆ.ಅಲ್ಲದೆ  ಸರ್ಕಾರ ರಚನೆಯ ಹಕ್ಕು ಮಂಡಿಸಿ ದೇವೇಂದ್ರ ಫಡ್ನವಿಸ್ ಅವರು ರಾಜ್ಯಪಾಲರಿಗೆ ಸಲ್ಲಿಸಿದ ಪತ್ರವನ್ನು ಕೂಡ ಇಂದು  ಬೆಳಗ್ಗೆ 10.30ರ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಸುಪ್ರೀಂ ಕೋರ್ಟ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಆದೇಶಿಸಿದೆ.
      ನಂತರ ಇವೆಲ್ಲಾ ದಾಖಲೆ, ಪತ್ರಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿದ ಬಳಿಕ ಸುಪ್ರೀಂ ಕೋರ್ಟ್ ಆದೇಶವನ್ನು ನೀಡಲಿದೆ. ನಿನ್ನೆ  ರಿಟ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಗೆ ನೊಟೀಸ್ ಜಾರಿ ಮಾಡಿದೆ.
     ನಿನ್ನೆ ನ್ಯಾಯಾಲಯದಲ್ಲಿ ನಡೆದ ವಾದ-ಪ್ರತಿವಾದಗಳು ಹೀಗಿವೆ:
     ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ವಾದ: ನಿನ್ನೆ ಬೆಳಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್, ಬಿಜೆಪಿ ಮತ್ತು ಶಿವಸೇನೆಯ ಚುನಾವಣಾ ಪೂರ್ವ ಮೈತ್ರಿ ಮುರಿದುಬಿದ್ದು ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಹೊಸ್ತಿಲಿನಲ್ಲಿದ್ದರು.
     ಈ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತ ಹಿಂಪಡೆದು ಯಾವುದೇ ಸಂಪುಟ ಸಭೆ ನಡೆಸದೆ ತರಾತುರಿಯಿಂದ ಸಿಎಂ ಮತ್ತು ಡಿಸಿಎಂ ಪ್ರಮಾಣವಚನ ನಡೆದುಹೋಯಿತು. ಸಂಪುಟ ಸಭೆ ನಡೆಸದಿದ್ದರೆ ಅಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಬೇಕಾಗುತ್ತದೆ.
    ನ್ಯಾಯಾಲಯ ದೇವೇಂದ್ರ ಫಡ್ನವಿಸ್ ಅವರಿಗೆ ಇಂದೇ ಬಹುಮತ ಸಾಬೀತುಪಡಿಸಲು ಆದೇಶ ನೀಡಬೇಕು. ಬಿಜೆಪಿ ಬಹುಮತ ಹೊಂದಿದ್ದರೆ ಅದನ್ನು ಸದನದಲ್ಲಿ ಸಾಬೀತುಪಡಿಸಲಿ, ಅವರಿಗೆ ಸಾಧ್ಯವಾಗದಿದ್ದರೆ ನಮಗೆ ಅವಕಾಶ ಕೊಡಲಿ ಎಂದರು.
    ಯಾರಾದರು ರಾತ್ರಿ 7 ಗಂಟೆಗೆ ಬಂದು ನಾವು ಸರ್ಕಾರ ರಚಿಸುತ್ತೀವಿ ಎಂದು ಹೇಳಿದರೆ ಅವಕಾಶ ಮಾಡಿಕೊಟ್ಟ ರಾಜ್ಯಪಾಲರ ಕ್ರಮ ಪಕ್ಷಪಾತ, ದುರುದ್ದೇಶದಿಂದ ಕೂಡಿದ ಮತ್ತು ನ್ಯಾಯಾಲಯದ ಎಲ್ಲಾ ಕಾನೂನಿಗೆ ವಿರುದ್ಧವಾಗಿ ಇದೆ.
     ಬಿಜೆಪಿಗೆ 41 ಎನ್ ಸಿಪಿ ಶಾಸಕರ ಬೆಂಬಲ ಇಲ್ಲದಿರುವಾಗ ಸರ್ಕಾರ ರಚನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಪ್ರಜಾಪ್ರಭುತ್ವಕ್ಕೆ ಎಸಗಿದ ದ್ರೋಹ ಮತ್ತು ಸರ್ವನಾಶ. ಇಂತಹ ಪರಿಸ್ಥಿತಿಯನ್ನು ಕರ್ನಾಟಕದಲ್ಲಿ ಕೂಡ ನೋಡಿದ್ದೇವೆ, ಬಿಜೆಪಿಯವರಿಗೆ ಬಹುಮತ ಇದ್ದರೆ ಸಾಬೀತುಪಡಿಸಲಿ.
    ಬೆಳಗ್ಗೆ 5.17ಕ್ಕೆ ರಾಷ್ಟ್ರಪತಿ ಆಡಳಿತ ಹಿಂತೆಗೆದುಕೊಂಡು 8 ಗಂಟೆಗೆ ಇಬ್ಬರು ಸಿಎಂ ಮತ್ತು ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಅವರು ಏನು ದಾಖಲೆಗಳನ್ನು ನೀಡಿದರು? ಗವರ್ನರ್ ಅವರಿಗೆ ನೀಡಲಾಗಿದ್ದ ಸಮಯದ ಪತ್ರವನ್ನು ಒದಗಿಸಿ ಎಂದು ನ್ಯಾಯಾಲಯ ಕೇಳಿದಾಗ ನಮಗೆ ಗೊತ್ತಿಲ್ಲ ಎಂದರು ಅಡ್ವೊಕೇಟ್ ಕಪಿಲ್ ಸಿಬಲ್.
    ಬಿಜೆಪಿ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮುಕುಲ್ ರೊಹ್ಟಗಿ: ಈ ವಿಚಾರದಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿಲ್ಲ. ಭಾನುವಾರ ಕೋರ್ಟ್ ನಲ್ಲಿ ವಿಚಾರಣೆ ಇಲ್ಲದಿರುವಾಗ ಇಂದೇ ಏಕೆ ನಡೆಯಿತು ಎಂದು ನನಗೆ ಗೊತ್ತಿಲ್ಲ. ಶಿವಸೇನೆ, ಎನ್ ಸಿಪಿ-ಕಾಂಗ್ರೆಸ್ ಅರ್ಜಿಯ ವಿಚಾರಣೆ ನಡೆಸುವ ಅಗತ್ಯವಿರಲಿಲ್ಲ.
   ವಿಚಾರಣೆ ನಡೆಸುವುದು ನ್ಯಾಯಾಲಯದ ವಿವೇಚನೆಗೆ ಬಿಟ್ಟದ್ದು ಎಂದು ನ್ಯಾಯಾಧೀಶರು ಉತ್ತರಿಸಿದರು.
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಮುಕುಲ್ ರೊಹ್ಟಗಿ, ಸರ್ಕಾರ ರಚಿಸಲು ರಾಜಕೀಯ ಪಕ್ಷಗಳಿಗೆ ಮೂಲಭೂತ ಹಕ್ಕುಗಳಿಲ್ಲ, ಹೀಗಾಗಿ ಅವರ ಮನವಿಗೆ ಅವಕಾಶವಿಲ್ಲ ಎಂದರು.
   ಕಾಂಗ್ರೆಸ್, ಎನ್ ಸಿಪಿ ಪರ ವಾದ ಮಂಡಿಸಿದ ನ್ಯಾಯಮೂರ್ತಿ ಅಭಿಷೇಕ್ ಸಿಂಘ್ವಿ: ಎನ್ ಸಿಪಿ ಅಜಿತ್ ಪವಾರ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ಮೇಲೆ ಅವರಿಗೆ ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲರು ಹೇಗೆ ಅವಕಾಶ ನೀಡುತ್ತಾರೆ? ಶುಕ್ರವಾರ ರಾತ್ರಿ 7 ಗಂಟೆಗೆ ನಾವು ಸರ್ಕಾರ ರಚಿಸುತ್ತೇವೆ ಎಂದು ಹೇಳಿದ ಉದ್ಧವ್ ಠಾಕ್ರೆಯವರಿಗೆ ರಾಜ್ಯಪಾಲರು ಏಕೆ ಅವಕಾಶ ನೀಡಲಿಲ್ಲ. ಎನ್ ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಮೂರೂ ಪಕ್ಷಗಳು ಇಂದು ಅಥವಾ ನಾಳೆಯೇ ಸದನ ಪರೀಕ್ಷೆಗೆ ಸಿದ್ದವಾಗಿವೆ.
   ವಾದ ಮಂಡನೆ ವೇಳೆ ನ್ಯಾಯಮೂರ್ತಿ ಅಭಿಷೇಕ್ ಸಿಂಘ್ವಿ ಉತ್ತರಾಖಂಡ್ ನಲ್ಲಿ ಕಾಂಗ್ರೆಸ್ ಸರ್ಕಾರ ವಜಾ ಮತ್ತು ಕರ್ನಾಟಕ ಕುರಿತು ಕಳೆದ ವರ್ಷದ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲೇಖಿಸಿದರು.
     ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ನಿರ್ಧಾರ ನಿರಂಕುಶ ಮತ್ತು ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿ ಕಾಂಗ್ರೆಸ್, ಎನ್ ಸಿಪಿ ಹಾಗೂ ಶಿವಸೇನೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದವು. ಅಲ್ಲದೆ ರಾಜ್ಯಪಾಲರು ದೇವೇಂದ್ರ ಫಡ್ನವಿಸ್ ಅವರು ಬಹುಮತ ಸಾಬೀತುಪಡಿಸಲು ಒಂದು ವಾರ ಕಾಲಾವಕಾಶ ನೀಡುವುದು ಕಾನೂನು ಬಾಹಿರವಾಗಿದ್ದು, ಇದು ಶಾಸಕರ ಕುದುರೆ ವ್ಯಾಪಾರಕ್ಕೆ ಅವಕಾಶ ನೀಡಿದಂತಾಗುತ್ತದೆ. ಹೀಗಾಗಿ 24 ಗಂಟೆಯಲ್ಲಿ ಬಹುಮತ ಸಾಬೀತಪಡಿಸುವಂತೆ ಸೂಚಿಸಬೇಕು ಎಂದು ಮೂರು ಪಕ್ಷಗಳು ಮನವಿ ಮಾಡಿದ್ದವು.
    ಬಿಜೆಪಿಗೆ ಸರ್ಕಾರ ರಚನೆಗೆ ಬೇಕಾದ ಬಹುಮತಕ್ಕೆ 40 ಸ್ಥಾನಗಳ ಕೊರತೆ ಇದ್ದರೂ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಹಿಂದೆ, ನವೆಂಬರ್ 10ರಂದು ಸರ್ಕಾರ ರಚಿಸುವಂತೆ ರಾಜ್ಯಪಾಲರು ಬಿಜೆಪಿಗೆ ಆಹ್ವಾನ ನೀಡಿತ್ತು. ಆಗ, ಬಿಜೆಪಿ ಬಹುಮತಕ್ಕೆ ಬೇಕಾದ ಸಂಖ್ಯೆ ಇಲ್ಲದ ಕಾರಣ, ಸರ್ಕಾರ ರಚನೆಯಿಂದ ಹಿಂದೆ ಸರಿದಿತ್ತು. ಸರ್ಕಾರ ರಚನೆಗೆ ಶಿವಸೇನೆ, ಎನ್?ಸಿಪಿ ಹಾಗೂ ಕಾಂಗ್ರೆಸ್?ಗೆ ಸ್ಪಷ್ಟ ಬಹುಮತ ಇದ್ದರೂ, ಬಹುಮತ ಇಲ್ಲದ ಪಕ್ಷಕ್ಕೆ ರಾಜ್ಯಪಾಲರು ಸರ್ಕಾರ ರಚಿಸಲು ಅವಕಾಶ ನೀಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries