ಕಾಸರಗೋಡು: ಇರಿಯಣ್ಣಿಯಲ್ಲಿ ನಡೆಯುತ್ತಿರುವ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಕನ್ನಡ ನಾಟಕಕ್ಕೆ ತೀರ್ಪುಗಾರರಾಗಿ ಕನ್ನಡ ಅರಿಯದವರನ್ನು ನೇಮಿಸಿರುವುದು ಕನ್ನಡ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಕಾಸರಗೋಡು ಜಿಲ್ಲೆಯ ಭಾಷಾ ವೈವಿಧ್ಯತೆಯನ್ನು ಪರಿಗಣಿಸಿ ತೀರ್ಪುಗಾರರ ತಂಡದಲ್ಲಿ ಕನ್ನಡ ಅಥವಾ ತುಳು ಅರಿತಿರುವ ಕನಿಷ್ಠ ಓರ್ವ ಸದಸ್ಯನನ್ನಾದರೂ ಇರಬೇಕೆಂಬ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಕನ್ನಡ ನಾಟಕ ಸ್ಪರ್ಧೆಯ ತೀರ್ಪುಗಾರರ ಆಯ್ಕೆಯಲ್ಲಿ ಆ ತೀರ್ಮಾನವನ್ನು ಉಲ್ಲಂಘಿಸಿ ಕನ್ನಡ ಅರಿಯದವರನ್ನು ನೇಮಿಸಲಾಗಿತ್ತು. ಆ ಮೂಲಕ ಕನ್ನಡ ವಿಭಾಗದ ಮಕ್ಕಳ ವಿಷಯದಲ್ಲಿ ತಾರತಮ್ಯ ನೀತಿ ತೋರಲಾಗಿದೆ.
ಕಾಸರಗೋಡು, ಮಂಜೇಶ್ವರ ಮತ್ತು ಕುಂಬಳೆ ಶಿಕ್ಷಣ ಉಪ ಜಿಲ್ಲೆಗಳಿಂದಲೇ ಜಿಲ್ಲಾ ಶಾಲಾ ಕಲೋತ್ಸವಕ್ಕೆ ಅತೀ ಹೆಚ್ಚು ಕನ್ನಡ ನಾಟಕಗಳು ಸ್ಪರ್ಧೆಗೆ ಬಂದಿತ್ತು. ಅದು ತಿಳಿದಿದ್ದರೂ ಈ ನಾಟಕಗಳ ತೀರ್ಪುಗಾರರನ್ನಾಗಿ ಕನ್ನಡ ಭಾಷೆಯ ಕನಿಷ್ಠ ಅರಿವಿಲ್ಲದವರನ್ನು ನೇಮಿಸುವ ಮೂಲಕ ಅನ್ಯಾಯ ತೋರಲಾಗಿತ್ತು. ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ ಏಳು ತಂಡಗಳಲ್ಲಿ ಐದು ತಂಡಗಳಿಗೆ ಬಿ ಗ್ರೇಡ್ ನೀಡಿರುವುದು ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ. ತೀರ್ಪು ಹೊರ ಬಿದ್ದಾಗ ಕನ್ನಡ ನಾಟಕದಲ್ಲಿ ಸ್ಪರ್ಧಿಸಿದ ಕನ್ನಡ ತಂಡದವರು ಮತ್ತು ಅವರು ಪ್ರತಿನಿಧಿಕರಿಸುವ ಶಾಲೆಗಳ ವಿದ್ಯಾರ್ಥಿಗಳಿಂದಲೂ ಭಾರೀ ಪ್ರತಿಭಟನೆ ವ್ಯಕ್ತವಾಯಿತು.