ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಆಡಳಿತ ಸಮಿತಿ ಸಭೆಯು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಅಹಂಕಾರದ ನುಡಿಗಳಿಗೆ ಇನ್ನೊಮ್ಮೆ ಸಾಕ್ಷಿಯಾಗಿರುವುದಾಗಿ ದೂರಲಾಗಿದೆ.
ಎಣ್ಮಕಜೆ ಗ್ರಾ.ಪಂ. ಕಾರ್ಯಾಲಯದಲ್ಲಿ ನ. 21 ರಂದು ನಡೆದ ಆಡಳಿತ ಸಮಿತಿ ಸಭೆಯಲ್ಲಿ ನ. 5.ರಂದು ನಡೆಸಿದ ಸಭೆಯ ತೀರ್ಮಾನಗಳ ಅವಲೋಕನ ನಡೆಸುತ್ತಿರುವಾಗ ಮಾಜಿ ಅಧ್ಯಕ್ಷ ರೂಪವಾಣಿ ಆರ್ ಭಟ್ ಕಳೆದ ಸಭೆಯಲ್ಲಿ ಕೈಗೊಂಡ ಅನೇಕ ತೀರ್ಮಾನಗಳು ಮಿನಿಟ್ಸ್ ನಿಂದ ಕಾಣೆಯಾಗಿರುವ ಬಗ್ಗೆ ಪ್ರಶ್ನಿಸಿದರು. ಕಜಂಪಾಡಿ ಶಾಲೆಗೆ ದೀಪ ಅಳವಡಿಸುವ ಬಗ್ಗೆ ಕಳೆದ ಸಭೆಯಲ್ಲಿ ಅನುದಾನ ನೀಡುವ ಬಗ್ಗೆ ತೀರ್ಮಾನವಾಗಿತ್ತು. ಕರಡು ಮಿನಿಟ್ಸ್ ನಲ್ಲಿ ಬರೆದಿರುವ ತೀರ್ಮಾನ ತಿರುಚಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದೇ ರೀತಿ ಸತೀಶ್ ಕುಲಾಲ್ ಅವರ ವಾರ್ಡಿನಲ್ಲಿ ಕೈಗೊಂಡ ತೀರ್ಮಾನಗಳು ಮಿನಿಟ್ಸ್ ನಲ್ಲಿ ದಾಖಲಿಸದ ಬಗ್ಗೆ ಪ್ರಶ್ನಿಸಿದಾಗ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅಹಂಕಾರದ ಉತ್ತರ ನೀಡಿ ಬಿಜೆಪಿ ಜನಪ್ರತಿನಿಧಿಗಳ ಬಾಯಿಮುಚ್ಚಿಸುವ ಪ್ರಯತ್ನ ನಡೆಸಿದರು. ಕಾಟಾಚಾರಕ್ಕಾಗಿ ನಡೆಸುವ ಆಡಳಿತ ಸಮಿತಿ ಸಭೆಗಳನ್ನು ನಿಲ್ಲಿಸುವುದು ಒಳಿತು ಎಂದು ಬಿಜೆಪಿ ಜನಪ್ರತಿನಿಧಿಗಳು ಅಭಿಪ್ರಾಯಪಟ್ಟಿರುವರು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಉಪಾಧ್ಯಕ್ಷರು ಹಾಗೂ ಅಧ್ಯಕ್ಷರು ಹಿಂದಿನ ಸಭೆಗಳಲ್ಲಿ ತಾವೇ ಕೈಗೊಂಡ ತೀರ್ಮಾನಗಳನ್ನು ಧಿಕ್ಕರಿಸಿ ನಡೆಯುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜನಪ್ರತಿನಿಧಿಗಳು ತಿಳಿಸಿದರು.ಬಳಿಕ ಕರಡು ತೀರ್ಮಾನಗಳನ್ನು ಪರಿಶೀಲಿಸಿದಾಗ ಬಿಜೆಪಿ ಜನಪ್ರತಿನಿಧಿಗಳ ಮಾತುಗಳು ಸತ್ಯವಾಗಿರುವುದು ಕಂಡುಬಂತು. ಈ ರೀತಿ ನಿರಂತರವಾಗಿ ತಾವೇ ತೆಗೆದ ತೀರ್ಮಾನಗಳನ್ನು ಮುಂದಿನ ಸಭೆಯಲ್ಲಿ ತಾವೇ ಉಲ್ಲಂಘಿಸಿ ಅಪಹಾಸ್ಯಕ್ಕೆ ಈಡಾಗುವ ಅನುಭವಸ್ಥ ಆಡಳಿತ ವರ್ಗದವರನ್ನು ಹಾಗೂ ಇದಕ್ಕೆ ಸಹಕಾರ ನೀಡುವ ಕಾರ್ಯದರ್ಶಿಯವರ ಬೇಜವಾಬ್ದಾರಿ ನಡೆಯ ಬಗ್ಗೆ ಪಂಚಾಯತಿ ಉಪನಿರ್ದೇಶಕರಿಗೆ ದೂರು ನೀಡಲು ಬಿಜೆಪಿ ಜನಪ್ರತಿನಿಧಿಗಳು ತೀರ್ಮಾನಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.