ಕಾಸರಗೋಡು: ಕೆ.ಎಸ್.ಆರ್.ಟಿ.ಸಿ.ಯ ಒಂದು ವಿಭಾಗಕ್ಕೆ ಸೇರಿದ ಸಿಬ್ಬಂದಿಗಳು ನ.೩ ಮಧ್ಯರಾತ್ರಿಯಿಂದ ೨೪ ತಾಸುಗಳ ಮುಷ್ಕರ ನಡೆಸಿದ್ದು, ಇದರಿಂದಾಗಿ ಕೆಎಸ್‌ಆರ್‌ಟಿಸಿ ಬಸ್ ಸೇವೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಬಸ್ ಸೇವೆಯನ್ನು ಅಸ್ತವ್ಯಸ್ತಗೊಳಿಸಿದ್ದು ಮಾತ್ರವಲ್ಲ ಬಸ್ ಪ್ರಯಾಣಿಕರನ್ನು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ವಿಪಕ್ಷ ಪರ ಸಂಘಟನೆಯಾದ ಟ್ರಾನ್ಸ್ಪೋರ್ಟ್ ಡಮೋಕ್ರೆಟಿಕ್ ಫೆಡರೇಶನ್‌ಗೆ ಸೇರಿದ ಸಿಬ್ಬಂದಿಗಳು ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊAಡು ಮುಷ್ಕರ ನಡೆಸಿದರು. ಮುಷ್ಕರದಿಂದಾಗಿ ಕೆಎಸ್‌ಆರ್‌ಟಿಸಿಯ ಕಾಸರಗೋಡು ಡಿಪೋದಿಂದ ಒಟ್ಟು ೯೨ ಬಸ್‌ಗಳ ಪೈಕಿ ೪೮ ಬಸ್‌ಗಳು ಮಾತ್ರವೇ ಸೋಮವಾರ ಸೇವೆ ನಡೆಸಿತು. ಮಿಕ್ಕುಳಿದ ಬಸ್‌ಗಳ ಸೇವೆ ಮೊಟಕುಗೊಂಡಿದೆ.
ಈ ಡಿಪೋದಿಂದ ಸೋಮವಾರ ಬೆಳಿಗ್ಗೆ ೬೩ ಬಸ್ ಸೇವೆ ಆರಂಭಗೊಳ್ಳಬೇಕಿತ್ತು. ಅದರಲ್ಲಿ ೨೩ ಬಸ್‌ಗಳು ಮಾತ್ರ ಸೇವೆ ನಡೆಸಿತು. ಕಾಸರಗೋಡು-ಮಂಗಳೂರು-ಸುಳ್ಯ ಮತ್ತು ಕಣ್ಣೂರು ಇತ್ಯಾದಿ ರೂಟ್‌ಗಳಲ್ಲಿ ಮಾತ್ರವೇ ಈ ಪೈಕಿ ಹೆಚ್ಚು ಬಸ್ ಸೇವೆ ನಡೆಸಿತು. ಉಳಿದ ರೂಟ್‌ಗಳಲ್ಲಿ ಬಸ್ ಸೇವೆ ಪೂರ್ಣವಾಗಿ ನಿಲುಗಡೆಗೊಂಡಿದ್ದು, ಇದರಿಂದ ಪ್ರಯಾಣಿಕರನ್ನು ತೀವ್ರ ಸಂಕಷ್ಟಕ್ಕೊಳಪಡಿಸಿತು. ನೌಕರರ ಮುಷ್ಕರದಿಂದಾಗಿ ಕೆಎಸ್‌ಆರ್‌ಟಿಸಿ ಬಸ್ ಸೇವೆಗಳ ಮೇಲೆ ರಾಜ್ಯದಾದ್ಯಂತ ತೀವ್ರ ಪರಿಣಾಮ ಬೀರಿತು.