ಪೆರ್ಲ: ಕೇರಳ ರಾಜ್ಯ ಸಾಕ್ಷರತಾ ಮಿಷನಿನ ನವಚೇತನ ಯೋಜನೆ ಮೂಲಕ ಎಣ್ಮಕಜೆ ಗ್ರಾ.ಪಂ.ನ ವಾಣಿನಗರ ಸಮೀಪದ ಕುತ್ತಾಜೆ ಎಸ್.ಸಿ.ಕಾಲನಿ ನಿವಾಸಿಗಳಾದ ವಯೋವೃದ್ಧರು ಸಮಕಾಲೀನ ಪರೀಕ್ಷೆ ಬರೆಯುವ ಮೂಲಕ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದರು.
ಕಾಸರಗೋಡು ಜಿಲ್ಲಾ ಸಾಕ್ಷರತಾ ಮಿಷನ್ ಆಯ್ದ ಗ್ರಾಮ ಪಂಚಾಯತಿಯ ಕಾಲನಿಗಳಲ್ಲಿ ಒಂದಾದ ಕುತ್ತಾಜೆ ಕಾಲನಿಯಲ್ಲಿ 25ರಿಂದ 79 ವರ್ಷ ಪ್ರಾಯದ ವರೆಗಿನವರು ಈ ಬಾರಿಯ ಪರೀಕ್ಷೆ ಬರೆದಿದ್ದಾರೆ.ನವಚೇತನ ಯೋಜನೆಯ ಸಚೇತಕ ಇಂದಿರಾ ಕುತ್ತಾಜೆ ಪರೀಕ್ಷೆಯ ನೇತೃತ್ವ ವಹಿಸಿದ್ದರು. ಪ್ರೇರಕ್ ಆನಂದ ಕುಕ್ಕಿಲ ಉಸ್ತುವಾರಿ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಪ್ರೇರಕ್ ಪರಮೇಶ್ವರ ನಾಯ್ಕ್, ವಾರ್ಡ್ ಕುಟುಂಬಶ್ರೀ ಅಧ್ಯಕ್ಷೆ ಚಂದ್ರಾವತಿ ಮೊದಲಾದವರು ಉಪಸ್ಥಿತರಿದ್ದರು.