ಕಾಸರಗೋಡು: ಎರಡುವರೆ ದಶಕಗಳ ನಂತರ ಇದೇ ಮೊದಲ ಬಾರಿಗೆ ಕಾಸರಗೋಡು ಜಿಲ್ಲೆಯಲ್ಲಿ ಕೇರಳ ರಾಜ್ಯ ಶಾಲಾ ಕಲೋತ್ಸವ ಜರುಗಲಿದ್ದು, ಇದಕ್ಕಾಗಿ ಕಾಞಂಗಾಡು ನಗರ ಸಜ್ಜುಗೊಳ್ಳುತ್ತಿದೆ. ನವೆಂಬರ್ ೨೮ರಿಂದ ಡಿಸೆಂಬರ್ ೨ರ ವರೆಗೆ ೨೦ಕ್ಕೂ ಹೆಚ್ಚು ವೇದಿಕೆಗಳಲ್ಲಿ ಸ್ಪರ್ಧೆಗಳು ಜರುಗಲಿದೆ.
ಆಹಾರ ತಪಾಸಣೆ:
ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಪೂರ್ವಭಾವಿಯಾಗಿ ಕಾಞಂಗಾಡು ನಗರದ ಹೋಟೆಲ್, ಕೂಲ್‌ಬಾರ್‌ಗಳಲ್ಲಿ ಆಹಾರ ಸುರಕ್ಷತೆ ಬಗ್ಗೆ ಖಾತ್ರಿಪಡಿಸುವ ನಿಟ್ಟಿನಲ್ಲಿ ವ್ಯಾಪಕ ತಪಾಸಣೆ ನಡೆಸಲು ವೆಲ್ಫೇರ್ ಸಮಿತಿ ಸಭೆ ತೀರ್ಮಾನಿಸಿದೆ. ನಗರಸಭಾ ಅಧ್ಯಕ್ಷ ವಿ.ವಿ ರಮೇಶನ್ ಸಮಾರಂಭ ಉದ್ಘಾಟಿಸಿದರು. ಕಲೋತ್ಸವ ನಡೆಯುವ ಎಲ್ಲಾ ವೇದಿಕೆಗಳಲ್ಲಿ ಶುದ್ಧ ಕುಡಿಯುವ ನೀರು ವಿತರಣೆ, ಶುಚೀಕರಣದೊಂದಿಗೆ ಹಸಿರು ಸಂಹಿತೆ ಪ್ರಕಾರ ಕಾರ್ಯಾಚರಿಸಲು ತೀರ್ಮಾನಿಸಲಾಯಿತು. ಈ ಎಲ್ಲ ಕಾರ್ಯಗಳಿಗೆ ಎನ್ನೆಸ್ಸೆಸ್, ಜೆ.ಆರ್.ಪಿ, ಸ್ಕೌಟ್ ಮತ್ತು ಗೈಡ್ಸ್, ಸ್ವಸಹಾಯ ಸಂಘ, ಆಶಾ ಕಾರ್ಯಕರ್ತೆಯರು, ಕುಟುಂಬಶ್ರೀ ಸದಸ್ಯರು, ಪಾಲಿಯೇಟಿವ್ ಕೇರ್ ಸಹಿತ ವಿವಿಧ ಸಂಘಟನೆಗಳ ಸಹಾಯ ಪಡೆಯಲಾಗುವುದು. ಅಲೋಪತಿ, ಹೋಮಿಯೋ, ಆಯುರ್ವೇದ ಇಲಾಖೆಗಳ ಸಹಕಾರದೊಂದಿಗೆ ಆರೋಗ್ಯ, ಶುಚಿತ್ವ ತಿಳಿವಳಿಕಾ ಶಿಬಿರ ನಡೆಸಲಾಗುವುದು.
ಪ್ರಚಾರಕ್ಕೆ ತಾರಾ ಮೆರಗು:
ರಾಜ್ಯ ಮಟ್ಟದ ೬೦ನೇ ಶಾಲಾ ಕಲೋತ್ಸವದ ಪ್ರಚಾರಾರ್ಥ ಮಲಯಾಳಚಿತ್ರರಂಗದ ಪ್ರಮುಖ ತಾರೆಯರು ನವೆಂಬರ್ ೨೦ರಂದು ಕಾಞಂಗಾಡಿಗೆ ಆಗಮಿಸಲಿದ್ದು, ಟೌನ್‌ಹಾಲ್ ಸಭಾಂಗಣದಲ್ಲಿ ಪ್ರಚಾರಕಾರ್ಯ ನಡೆಸಲಿದ್ದಾರೆ. ೨೪ರಂದು ಕಾಞಂಗಾಡು ಸೂರ್ಯ ಆಡಿಟೋರಿಯಂನಲ್ಲಿ ದೃಶ್ಯ ವಿಸ್ಮಯ ಕಲಾಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪ್ರಮುಖ ತಾರೆಯರಾದ ಮಂಜು ವಾರ್ಯರ್, ಟೊವಿನೋ ಥಾಮಸ್ ಪಾಲ್ಗೊಳ್ಳಲಿದ್ದಾರೆ.
ಕಲೋತ್ಸವ ನಡೆಯಲಿರುವ ಕಾಞಂಗಾಡು ನಗರದಲ್ಲಿ ಸಾರಿಗೆ ನಿಯಂತ್ರಣಕ್ಕಾಗಿ ಒಂದು ಸಾವಿರ ಮಂದಿ ಪೊಲೀಸರನ್ನೊಳಗೊಂಡ ತಂಡ ಕಾರ್ಯಾಚರಿಸಲಿದೆ. ಇವರ ಹೊರತಾಗಿ ಎನ್‌ಸಿಸಿ, ಸಕೌಟ್, ವಿದ್ಯಾರ್ಥಿ ಪೊಲೀಸ್ ಪಡೆ ಕಾರ್ಯಾಚರಿಸಲಿದೆ.