ನವದೆಹಲಿ: ಸಾಂವಿಧಾನಿಕ ವ್ಯವಸ್ಥೆಯಲ್ಲಿ ರಾಜ್ಯಪಾಲರು ಪ್ರಮುಖ ಪಾತ್ರ ವಹಿಸುತ್ತಾರೆ. ಅಭಿವೃದ್ಧಿಯಲ್ಲಿ ಹಿಂದೆ ಉಳಿದಿರುವ ಜನರ ಜೀವನವನ್ನು ಸುಧಾರಿಸಲು ರಾಜ್ಯಪಾಲರು ಸರಿಯಾದ ಮಾರ್ಗದರ್ಶನ ನೀಡುವ ಅವಕಾಶ ಹೊಂದಿದ್ದಾರೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದ್ದಾರೆ.
ಶನಿವಾರ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‍ಗಳ ಎರಡು ದಿನಗಳ ಸಮ್ಮೇಳನದ ಆರಂಭಿಕ ಭಾಷಣದಲ್ಲಿ ಅವರು ಮಾತನಾಡಿದರು.
ಬುಡಕಟ್ಟು ಜನಾಂಗದವರ ಅಭಿವೃದ್ಧಿ ಮತ್ತು ಸಬಲೀಕರಣವು ಎಲ್ಲರನ್ನೂ ಒಳಗೊಳ್ಳುವಿಕೆಯ ಪ್ರಗತಿ ಮತ್ತು ಆಂತರಿಕ ಭದ್ರತೆಗೆ ಸಂಬಂಧಿಸಿದೆ. ಅಭಿವೃದ್ದಿಯಲ್ಲಿ ಹಿಂದುಳಿದಿರುವ ಜನರ ಜೀವನ ಸುಧಾರಣೆಗಾಗಿ ತಮಗೆ ನೀಡಿರುವ ಸಾಂವಿಧಾನಿಕ ಅಧಿಕಾರಗಳನ್ನು ಬಳಸಿಕೊಂಡು ರಾಜ್ಯಪಾಲರು ಸರಿಯಾದ ಎಲ್ಲ ಮಾರ್ಗದರ್ಶನ ನೀಡಬಹುದು ಎಂದು ಅವರು ಹೇಳಿದರು. ದೇಶದ ಅಭಿವೃದ್ಧಿ ಹಿತದೃಷ್ಟಿಯಿಂದ ನಾವು ಆರೋಗ್ಯಕರ ಒಕ್ಕೂಟ ವ್ಯವಸ್ಥೆಗೆ ಒತ್ತು ನೀಡುತ್ತಿರುವಾಗ ರಾಜ್ಯಪಾಲರ ಪಾತ್ರ ಹೆಚ್ಚು ಮಹತ್ವದ್ದಾಗಿದೆ. ಎಲ್ಲ ರಾಜ್ಯಪಾಲರು ಸಾರ್ವಜನಿಕ ಜೀವನದ ಅಪಾರ ಅನುಭವವನ್ನು ಹೊಂದಿದ್ದಾರೆ. ಈ ಅನುಭವದ ಗರಿಷ್ಠ ಲಾಭವನ್ನು ದೇಶದ ಜನರು ಪಡೆಯಬೇಕು. ರಾಜ್ಯಪಾಲರ ಪಾತ್ರವು ಸಂವಿಧಾನದ ರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ . ತಮ್ಮ ರಾಜ್ಯಗಳ ಜನರ ಸೇವೆ ಮತ್ತು ಕಲ್ಯಾಣದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಸಾಂವಿಧಾನಿಕ ಬದ್ಧತೆಯನ್ನು ಹೊಂದಿದ್ದಾರೆ ಎಂದು ರಾಷ್ಟ್ರಪತಿ ಹೇಳಿದರು.