ಕುಂಬಳೆ: ಮದ್ಯ, ಮಾದಕ ದ್ರವ್ಯ, ತಂಬಾಕು ಉತ್ಪನ್ನಗಳ ಸೇವನೆಯಿಂದ ಯುವ ಜನಾಂಗ ಹಾದಿ ತಪ್ಪುತ್ತಿದೆ.ಕ್ಷಣಿಕ ಸುಖ ಅಥವಾ ಸುಖವೆಂಬ ಭ್ರಮೆಗೆ ಒಳಗಾದ ಮಕ್ಕಳು ದುರಂತದೆಡೆಗೆ ಹೆಜ್ಜೆ ಇರಿಸುತ್ತಿರುವುದು ಕಳವಳಕಾರಿ ಎಂದು ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ರಂಜಿತ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.
ಗುರುವಾರ ನಡೆದ ಶಾಲಾ ಅಸಂಬ್ಲಿಯಲ್ಲಿ ಮಕ್ಕಳ ದಿನಾಚರಣೆ, 'ಲಹರಿ ಮುಕ್ತ ದಿನ' ಕಾರ್ಯಕ್ರಮದಲ್ಲಿ ಮಾತನಾಡಿದರು,
ಆರಂಭದಲ್ಲಿ ತಾತ್ಕಾಲಿಕ ಸುಖಕ್ಕಾಗಿ ಮಾದಕ ವಸ್ತು ಸೇವಿಸುವ ವ್ಯಕ್ತಿ ಬಳಿಕ ಅವುಗಳ ಅವಲಂಬನೆಗೆ ಒಳಗಾಗುತ್ತಾನೆ.ವ್ಯಸನ ಎಂದರೆ ಮಿದುಳಿನ ಅಸ್ವಸ್ಥತೆ.ಮಾದಕ ವಸ್ತುಗಳಿಗೆ ದಾಸರಾದವರಿಗೆ ಬದುಕಿನ ಉಳಿದ ಅವಿಭಾಜ್ಯ ಅಂಗಗಳಾದ ಕುಟುಂಬ, ಸ್ನೇಹಿತರು ಮತ್ತು ಕೆಲಸದ ಜವಾಬ್ದಾರಿಗಳ ಬಗ್ಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಮಾದಕತೆ ವ್ಯಕ್ತಿಯ ಮಾನಸಿಕತೆ, ಸಾಮಾಜಿಕ ಅಂಶಗಳ ಮೇಲೆ ಕೆಟ್ಟ ಪ್ರಭಾವ ಬೀರುತ್ತಾನೆ.ಕುಟುಂಬ, ಸುತ್ತಮುತ್ತಲಿನ ಸಮಾಜದವರಿಗೆ ಸಮಸ್ಯೆಗಳನ್ನು ತಂದೊಡ್ಡುತ್ತಾನೆ.ಮಾದಕ ವ್ಯಸನದಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ಚಿಂತಿಸಿ ವ್ಯಸನ ಹಾಗೂ ವ್ಯಸನಿಗಳಿಂದ ದೂರವಿರಬೇಕು.ಹೆತ್ತವರು, ಗುರು ಹಿರಿಯರ ಉಪದೇಶದ ಮಾತುಗಳನ್ನು ಕೇಳಿ ಶಿಕ್ಷಣ, ಇತರ ಉತ್ತಮ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿ ಜೀವನದ ಗುರಿ ಸಾಧಿಸಲು ಶ್ರಮಿಸಬೇಕು ಎಂದರು.
ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಹಾರಲಾಲ್ ನೆಹರು ಅವರ ಜನ್ಮ ದಿನಾಚರಣೆ ಅಂಗವಾಗಿ ಅವರನ್ನು ಸ್ಮರಿಸಿ, ಮಕ್ಕಳ ದಿನಾಚರಣೆಯ ಶುಭ ಕೋರಲಾಯಿತು. ದೀಕ್ಷಾ ಶ್ರೀ, ಮರಿಯಮ್ಮತ್ ಶಾಹಿಲ, ಫಾತಿಮತ್ ನಫ್ಲ , ಶಾಹೀಮ ಶರೀನ್ , ಅಜಿತ್ ಮಾತನಾಡಿದರು. ಅರ್ಥಶಾಸ್ತ್ರ ಶಿಕ್ಷಕ ಮುಸ್ತಫ ಸ್ವಾಗತಿಸಿ,ಶಾಲಾ ನಾಯಕ ಮೊಹಮ್ಮದ್ ಸಾದ್ ವಂದಿಸಿದರು.