ಮುಂಬೈ: ಶಿವಸೇನಾ ಮುಖ್ಯಸ್ಥ ಹಾಗೂ 'ಮಹಾ ವಿಕಾಸ ಅಘಾದಿ' ಮೈತ್ರಿಕೂಟದ ನಾಯಕ ಉದ್ಧವ್ ಠಾಕ್ರೆ ಅವರು ಮಂಗಳವಾರ ರಾತ್ರಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದು, ಗುರುವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
'ಮಹಾ ವಿಕಾಸ ಅಘಾದಿ' ನಾಯಕರು ಇಂದು ರಾತ್ರಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿ, ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾಳಾಸಾಹೇಬ್ ಥೋರಾಟ್ ಅವರು, ಉದ್ಧವ್ ಠಾಕ್ರೆ ಅವರು ನವೆಂಬರ್ 28ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಪುಟ ಮತ್ತು ಖಾತೆ ಹಂಚಿಕೆ ಬಗ್ಗೆ ಇನ್ನು ನಿರ್ಧಾರವಾಗಿಲ್ಲ ಎಂದರು.ಇದಕ್ಕು ಮುನ್ನ ಖಾಸಗಿ ಹೋಟೆಲ್ ನಲ್ಲಿ ನಡೆದ ಶಿವಸೇನಾ, ಕಾಂಗ್ರೆಸ್ ಹಾಗೂ ಎನ್ ಸಿಪಿ ಪಕ್ಷಗಳ ಶಾಸಕರ ಸಭೆಯಲ್ಲಿ ಉದ್ಧವ್ ಠಾಕ್ರೆ ಅವರನ್ನು ಮಹಾ ವಿಕಾಸ ಅಘಾದಿ ಮೈತ್ರಿಕೂಟದ ನಾಯಕನಾಗಿ ಆಯ್ಕೆ ಮಾಡಲಾಗಿತ್ತು.ಮಹಾ ವಿಕಾಸ ಮೈತ್ರಿಕೂಟದ ನಾಯಕನಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಉದ್ಧವ್ ಠಾಕ್ರೆ ಅವರು, ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಯಾವತ್ತೂ ಕನಸು ಕಂಡಿರಲಿಲ್ಲ. ಇದಕ್ಕಾಗಿ ನಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಇತರರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಉದ್ಧವ್ ಠಾಕ್ರೆ ಅವರು ಗುರುವಾರ ಶಿವಾಜಿ ಪಾರ್ಕ್ ನಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.