ಬದಿಯಡ್ಕ :'ವಿದ್ಯಾರ್ಥಿಗಳಿಗೆ ಕರ್ತವ್ಯದಲ್ಲಿ ಶ್ರದ್ಧೆ ಹಾಗೂ ದೇವರ ಮೇಲಿನ ಭಕ್ತಿ ಇರಬೇಕು. ಅವರ ಆಂತರಾತ್ಮದ ಶಕ್ತಿಯನ್ನು ಪ್ರಚೋದಿಸಲು ದೈವಭಕ್ತಿಯೇ ಶಕ್ತಿಯಾಗುತ್ತದೆ. ಆದ್ದರಿಂದ ದೈವಭಕ್ತಿಯೇ ಪ್ರತಿಯೊಬ್ಬ ಸಾಧಕನ ಗೆಲುವಿಗೆ ಶಕ್ತಿಯಾಗುತ್ತದೆ' ಎಂದು ಬೆಂಗಳೂರಿನ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಪದ್ಮನಾಭ ಕೆದಿಲಾಯ ಹೇಳಿದರು.
ಅವರು ಭಾನುವಾರ ಕೆದಿಲಾಯ ಪ್ರತಿಷ್ಠಾನದ ಆಶ್ರಯದಲ್ಲಿ ಬದಿಯಡ್ಕದ ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳ ಕನ್ನಡ ಶತಕವಿಗೋಷ್ಠಿ-೨೦೧೯ನ್ನು ದೀಪ ಉರಿಸಿ ಚಾಲನೆ ನೀಡಿ ಮಾತನಾಡಿದರು.
ಸಭೆಯಲ್ಲಿ ಶಿಕ್ಷಣರತ್ನ ಪ್ರಶಸ್ತಿ ವಿಜೇತ ಶಿಕ್ಷಕಿ ಪುಂಡೂರು ಪ್ರಭಾವತಿ ಕೆದಿಲಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಸಾರ್ಥಕ ಜೀವನ ನಡೆಸಬೇಕಾದರೆ ಸಾತ್ವಿಕ ಮನಸ್ಸು ಮುಖ್ಯ. ಇದು ಸಾಹಿತ್ಯದ ಸಂಪರ್ಕದಿAದ ದೊರೆಯುತ್ತದೆ. ಸಾಹಿತಿಯಾದವನು ನೆಮ್ಮದಿ, ದೃಢಚಿತ್ತ, ಮನುಷ್ಯತ್ವ ಸಹಿತ ಎಲ್ಲಾ ಸದ್ಗುಣಗಳನ್ನು ಹೊಂದಿರುತ್ತಾನೆ. ಆದರ್ಶ ವ್ಯಕಿತ್ವಕ್ಕೆ ಸಾಹಿತ್ಯದ ಪ್ರೇರಣೆ ಬಹಳಷ್ಟಿದೆ ಎಂದು ಹೇಳಿದರು.
ಮಕ್ಕಳ ಶತಕವಿಗೋಷ್ಠಿಯನ್ನು ಚಲನಚಿತ್ರ ನಟ ಕಾರ್ಕಳ ಶೇಖರ ಭಂಡಾರಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಹಾಗೂ ನಗರ ಪ್ರದೇಶದ ಸಂಘಟನೆಗಳು ಹೊಸ ಪ್ರತಿಭೆಗಳನ್ನು ಹುಡುಕಿ ಹೆಕ್ಕುವ ಮೂಲಕ ಸಮಾಜಮುಖಿಯಾಗಬೇಕು. ಸಂಘಟನೆಗಳಿAದ ಸಂಘರ್ಷ ಉಂಟಾಗಬಾರದು. ಮಕ್ಕಳ ಎಳೆಯ ಮನಸ್ಸು ಬಹಳ ಮುಗ್ದವಾಗಿದೆ. ಈ ವಯಸ್ಸಿನಲ್ಲಿ ನೀಡುವ ಬೋಧನೆಗಳು ಅವರ ಜೀವನಕ್ಕೆ ಆಧಾರವಾಗುತ್ತದೆ. ಮಕ್ಕಳಿಗೆ ಎಳವೆಯಲ್ಲೇ ಸಾಹಿತ್ಯದ ಆಸಕ್ತಿ ಅರಳಿಸಬೇಕು ಎಂದು ಹೇಳಿದರು. ವಕೀಲೆ ಪರಿಮಳಾ ಮಂಗಳೂರು ಶುಭ ಹಾರೈಸಿದರು. ಸಾಹಿತಿ ವಿರಾಜ್ ಅಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಸರಗೋಡು ಜಿಲ್ಲೆಯ ಕನ್ನಡ ಮಕ್ಕಳಲ್ಲಿ ಕನ್ನಡದ ಆಸಕ್ತಿ ಅರಳಿಸಬೇಕಾದ ಅಗತ್ಯವಿದೆ. ಭವಿಷ್ಯದಲ್ಲಿ ಕನ್ನಡ ಭಾಷೆಯ ರಕ್ಷಣೆಯಾಗಬೇಕಾದರೆ ಇಂದಿನ ಮಕ್ಕಳಲ್ಲಿ ಕನ್ನಡ ಜಾಗೃತಿ ಮೂಡಬೇಕು. 'ಇಂದಿನ ಮಕ್ಕಳೇ ಜಿಲ್ಲೆಯ ಮುಂದಿನ ಕನ್ನಡ ಮುಖಂಡರು' ಎಂಬ ಧೋರಣೆಯಲ್ಲಿ ಈ ಮಕ್ಕಳ ಸಾಹಿತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಘಟನೆಯ ಯೋಜನೆಗೆ ಜಿಲ್ಲೆಯ ಕನ್ನಡಿಗ ಸಾಹಿತ್ಯ ಪ್ರಿಯ ಮಕ್ಕಳಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ಹೇಳಿದರು.
ಅಭಿಜ್ಞಾ ಭಟ್ ಪ್ರಾರ್ಥಿಸಿದರು. ಶ್ರೀಶಕುಮಾರ ಪಂಜಿತ್ತಡ್ಕ ಸ್ವಾಗತಿಸಿ, ಶಶಿಕಲಾ ಕುಂಬಳೆ ವಂದಿಸಿದರು. ಅಮೀಶಾ ಎಸ್ ಎನ್ ಹಾಗೂ ಆಶಿತಾ ಎಂ ಕಾರ್ಯಕ್ರಮ ನಿರೂಪಿಸಿದರು. ಶತಕವಿಗೋಷ್ಠಿಯಲ್ಲಿ ಕಾಸರಗೋಡು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಸುಮಾರು ೧೦೪ ಮಂದಿ ಬಾಲಕವಿಗಳು ಕವನ ವಾಚಿಸಿದರು. ಕವಿಗಳಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕ ಜಯಾನಂದ ಪೆರಾಜೆ ಸಮಾರೋಪ ಭಾಷಣ ಮಾಡಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಚಿತ್ತರಂಜನ್ ಕಡಂದೇಲು, ಧನುಶ್ರೀ ಹಾಗೂ ಅಭಿಜ್ಞಾ ಭಟ್ ಅನಿಸಿಕೆ ಹೇಳಿದರು. ಕಾರ್ಯಕ್ರಮದಲ್ಲಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ಕೆ ನರಸಿಂಹ ಏತಡ್ಕ, ಶಾಂತಾ ಪುತ್ತೂರು, ವಾಣಿ ಪಿ ಎಸ್, ಸೌಮ್ಯಗುರು ಕಾರ್ಲೆ ಮೊದಲಾದವರು ಭಾಗವಹಿಸಿದ್ದರು.
ಕೃತಿ ಬಿಡುಗಡೆ : ಶತ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಎಲ್ಲಾ ಬಾಲಕವಿಗಳ ಕವನಗಳನ್ನು ಒಟ್ಟು ಸೇರಿಸಿ ಕವನ ಸಂಕಲವನ್ನು ಪ್ರಕಟಿಸಲು ಪ್ರಾಯೋಜಕತ್ವ ವಹಿಸುವುದಾಗಿ ನಿವೃತ್ತ ನ್ಯಾಯಾಧೀಶ ಪದ್ಮನಾಭ ಕೆದಿಲಾಯರು ಪ್ರಕಟಿಸಿದರು. ಮಕ್ಕಳಿಂದ ವೈವಿದ್ಯಮಯ ವಿಚಾರಗಳಿಗೆ ಸಂಬAಧಿಸಿದAತೆ ಉತ್ತಮ ಕವನಗಳು ಪ್ರಸ್ತುತಗೊಂಡುವು. ಕವಿಗೋಷ್ಠಿಯಲ್ಲಿ ಭಾಗವಹಿಸುವ ಮಕ್ಕಳ ಪೋಷಕರೂ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾಸರಗೋಡು ಜಿಲ್ಲೆಯಲ್ಲಿ ಮೊತ್ತಮೊದಲ ಬಾರಿಗೆ ಮಕ್ಕಳ ಶತಕವಿಗೋಷ್ಠಿಯನ್ನು ಕೆದಿಲಾಯ ಪ್ರತಿಷ್ಠಾನದ ಜಿಲ್ಲಾ ಘಟಕ ಆಯೋಜಿಸಿದ ಬಗ್ಗೆ ಮೆಚ್ಚುಗೆ ಸೂಚಿಸಿದರು.