ಕೊಚ್ಚಿ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಲು ಮುಂದಾಗಿದ್ದ ಹೋರಾಟಗಾರ್ತಿ ಬಿಂದು ಅಮ್ಮಿನಿ ಎಂಬುವವರ ಮೇಲೆ ಪೆಪ್ಪರ್ ಸ್ಪ್ರೇ ಮೂಲಕ ದಾಳಿ ನಡೆಸಿದ ಘಟನೆ ನಡೆದಿದೆ. ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ತೆರಳುವ ಸಲುವಾಗಿ ಕೊಚ್ಚಿಗೆ ಬಂದಿದ್ದ ಬಿಂದು ಅವರು ದೇವಾಲಯಕ್ಕೆ ಟ್ರೆಕ್ಕಿಂಗ್ ಮೂಲಕ ತೆರಳಲು ಏರ್ಪಾಡು ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರ ಮೇಲೆ ವ್ಯಕ್ತಿಯೊಬ್ಬರು ಪೆಪ್ಪರ್ ಸ್ಪ್ರೆ ಮೂಲಕ ದಾಳಿ ನಡೆಸಿದ್ದು, ಬಿಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಬರಿಮಲೆ ತೀರ್ಪು: ಸಪ್ತಸದಸ್ಯರ ವಿಸ್ತೃತ ಪೀಠಕ್ಕೆ ವರ್ಗಾವಣೆ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರೂ ಇಂದು ಅಯ್ಯಪ್ಪ ದೇವಾಲಯ ಪ್ರವೇಶಿಸಲಿದ್ದು, "ಸಂವಿಧಾನ ದಿನವಾದ ಇಂದು ನಾವು ಶಬರಿಮಲೆಗೆ ಭೇಟಿ ನೀಡಿಯೇ ನೀಡುತ್ತೇವೆ. ನಮ್ಮನ್ನು ರಾಜ್ಯ ಸರ್ಕಾರವಾಗಲೀ, ಪೆÇಲೀಸರಾಗಲಿ ತಡೆಯಲು ಸಾಧ್ಯವಿಲ್ಲ. ನಮಗೆ ಭದ್ರತೆ ಕೊಡುತ್ತಾರೋ ಬಿಡುತ್ತಾರೋ, ಇಂದು ನಾವು ದೇವಾಲಯ ಪ್ರವೇಶಿಸುವುದು ಖಂಡಿತ" ಎಂದು ದೇಸಾಯಿ ಹೇಳಿದ್ದಾರೆ.
ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಹೇರಿದ್ದ ನಿಬರ್ಂಧವನ್ನು ತೆರವುಗೊಳಿಸಿದ್ದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿ ಪ್ರಕರಣವನ್ನು ಇತ್ತೀಚೆಗಷ್ಟೆ ಸಪ್ತ ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ. ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ವಾದವಾಗಿತ್ತು. ಆದರೆ 2018 ರ ಸೆಪ್ಟೆಂಬರ್ ನಲ್ಲಿ ಈ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಮಹಿಳೆಯರು ದೇವಾಲಯ ಪ್ರವೇಶಿಸಬಹುದು ಎಂದಿತ್ತು.