ಪೆರ್ಲ: ಶಿರಿಯ ಅಣೆಕಟ್ಟು ಶೀಘ್ರ ನವೀಕರಿಸಬೇಕೆಂದು ಯೂತ್ ಕಾಂಗ್ರೆಸ್ ಕಾಸರಗೋಡು ಪಾರ್ಲಿಮೆಂಟ್ ಮಾಜಿ ಕಾರ್ಯದರ್ಶಿ ಎಂ.ಎಚ್.ಆರಿಸ್ ಶೇಣಿ ಆಗ್ರಹಿಸಿದ್ದಾರೆ.
ಪುತ್ತಿಗೆ ಪಂಚಾಯತಿಯ ನಾಲ್ಕು ವಾರ್ಡುಗಳಿಗೆ ಕೃಷಿ ಅಗತ್ಯಗಳಿಗಿರುವ ನೀರಾವರಿಗೆ 13 ಕಿಲೋ ಮೀಟರ್ ದೂರದಲ್ಲಿರುವ ತೋಡಿನ ಮೂಲಕ ಕೃಷಿ ಭೂಮಿಗೆ ನೀರು ತಲುಪಿಸಲಿರುವ ವ್ಯವಸ್ಥೆ ಈ ಅಣೆಕಟ್ಟಾಗಿದೆ. ಐವತ್ತು ವರ್ಷಗಳ ಹಿಂದೆ ಶಿರಿಯ ಹೊಳೆಯಲ್ಲಿ ನಿರ್ಮಿಸಿದ ಅಣೆಕಟ್ಟಿನ ದುರಸ್ತಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಇದರಿಂದ ಯೋಜನೆ ಉಪಯೋಗಶೂನ್ಯವಾಗಿದೆ. ಕೃಷಿಕರಿಗೆ ಇದು ಪ್ರತಿಕೂಲಕರವಾಗಿ ಬಾಧಿಸಿದೆ. ಕಿರು ನೀರಾವರಿ ಇಲಾಖೆ ತೋಡು ನವೀಕರಿಸಲು ನಾಮಮಾತ್ರವಾದ ಹಣ ಮಾತ್ರವೇ ನೀಡುವುದರಿಂದ ಕಾಮಗಾರಿ ನಡೆಸಲು ಗುತ್ತಿಗೆದಾರರು ತಯಾರಾಗುತ್ತಿಲ್ಲ. ಆದುದರಿಂದ ಎರಡು ವರ್ಷಗಳಿಂದ ಇದರ ದುರಸ್ತಿ ಕಾಮಗಾರಿ ನಡೆದಿಲ್ಲ. ಈ ಬಾರಿ ಐದು ಲಕ್ಷ ರೂ.ನ ತೋಡು ಶುಚಿಗೊಳಿಸುವ ಕಾಮಗಾರಿ ನಡೆಯುತ್ತಿದ್ದರೂ 13 ಕಿಲೋ ಮೀಟರ್ ದೂರದಲ್ಲಿರುವ ತೋಡಿನಲ್ಲಿ ರಾಶಿಬಿದ್ದಿರುವ ಮಣ್ಣು, ಮರಗಳನ್ನು ತೆರವುಗೊಳಿಸಿ ತೋಡನ್ನು ಸಂಪೂರ್ಣವಾಗಿ ಶುಚಿಗೊಳಿಸಲು ಸಾಧ್ಯವಿಲ್ಲ ಎಂಬ ಆತಂಕ ಕೃಷಿಕರದ್ದಾಗಿದೆ. ಕಳೆದ ಎರಡು ವರ್ಷ ತೋಡು ಶುಚಿಗೊಳಿಸದಿರುವುದರಿಂದ ಮಣ್ಣಿನ ಪ್ರಮಾಣ ತೋಡಿನಲ್ಲಿ ಹೆಚ್ಚಾಗಿದೆ.
ಅಣೆಕಟ್ಟಿನ ಶಟರ್‍ಗಳಿಗೆ ತುಕ್ಕು ಹಿಡಿದಿರುವುದುರಿಂದ ನೀರು ತೆರೆದು ಬಿಡಲು ಸಾಧ್ಯವಾಗುತ್ತಿಲ್ಲ. ತೋಡು ನವೀಕರಿಸಲು ಮಾತ್ರವೇ ನೀಡಲಾಗಿದೆ. ಪುತ್ತಿಗೆ ಪಂಚಾಯತಿಯ 3, 4, 13 ಹಾಗೂ 14ನೇ ವಾರ್ಡುಗಳ ಮೂಲಕ ಹಾದುಹೋಗುವ ಚರಂಡಿಯನ್ನು ಆಗಸ್ಟ್‍ನಿಂದ ನವೆಂಬರ್ ವರೆಗೆ ತೆರೆದುಬಿಡಲಾಗಿದೆ. ಮೊದಲು ಇದರ ಮೇಲ್ನೋಟಕ್ಕೆ ಕಾರ್ಮಿಕರಿದ್ದರು. 1000 ಎಕರೆಯಷ್ಟು ತೆಂಗು, ಅಡಕೆ, ಭತ್ತ ಕೃಷಿಗೆ ಇದರ ಪ್ರಯೋಜನ ಲಭಿಸಿತ್ತು. ಶೀಘ್ರದಲ್ಲೇ ಅಣೆಕಟ್ಟಿನ ದುರಸ್ತಿ ಕಾಮಗಾರಿ ನಡೆದರೆ ಪ್ರದೇಶದ ನೂರಾರು ಕೃಷಿಕರಿಗೆ ನೆರವಾದೀತು ಎಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.