ಕಾಸರಗೋಡು: ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಸಪ್ತಸದಸ್ಯರ ಪೀಠಕ್ಕೆ ವರ್ಗಾಯಿಸುತ್ತಿದ್ದಂತೆ, ಕೇರಳದ ಎಡರಂಗ ಸರ್ಕಾರಕ್ಕೆ ಮತ್ತೆ ತಲೆನೋವು ಕಾಡಲಾರಂಭಿಸಿದೆ. ಒಂದೆಡೆ ಸುಪ್ರೀಂ ಕೋರ್ಟು ಆದೇಶ ಪಾಲನೆಗೆ ಬದ್ಧರಾಗುವುದರ ಜತೆಗೆ, ಯುವತಿಯರ ಪ್ರವೇಶಕ್ಕೆ ಅನುಮತಿ ಕಲ್ಪಿಸದಿರುವಂತೆ ಭಕ್ತಾದಿಗಳ ಒತ್ತಡಕ್ಕೆ ಮಣಿಯಬೇಕಾದ ಇಕ್ಕಟ್ಟಿನ ಸ್ಥಿತಿ ಸರ್ಕಾರಕ್ಕೆ ಎದುರಾಗಿದೆ.
ಎಲ್ಲ ಹರೆಯದ ಯುವತಿಯರಿಗೂ ಶಬರಿಮಲೆಗೆ ಪ್ರವೇಶಾನುಮತಿ ಕಲ್ಪಿಸುವಂತೆ ಸುಪ್ರೀಂ ಕೋರ್ಟು 2018ರಲ್ಲಿ ನೀಡಿದ ಆದೇಶವನ್ನು ಅಂದು ಶತಾಯಗತಾಯ ಪಾಲಿಸಲು ಸರ್ಕಾರ ಮುಂದಾಗಿದ್ದು, ಇದಕ್ಕೆ ಆಚಾರ ಅನುಷ್ಠಾನ ವಿಶ್ವಾಸಿಗಳಿಂದ ಭಾರೀ ಪ್ರತಿಭಟನೆ ಎದುರಿಸಬೇಕಾಗಿ ಬಂದಿತ್ತು. ಸರ್ಕಾರ ಇದಕ್ಕೆ ಸೂಕ್ತ ಬೆಲೆಯನ್ನೂ ತೆರಬೇಕಾಗಿ ಬಂದಿತ್ತು. ಹೋರಾಟಗಾರ್ತಿಯರನ್ನು ಸರ್ಕಾರ ಪೊಲೀಸ್ ಭದ್ರತೆಯೊಂದಿಗೆ ಶಬರಿಮಲೆಗೆ ತಲುಪಿಸಲು ಮುಂದಾಗಿರುವುದು ಪ್ರತಿಭಟನೆ ಹೆಚ್ಚಲು ಕಾರಣವಾಗಿತ್ತು.
ಪ್ರಸಕ್ತ 2018ರಲ್ಲಿ ಸುಪ್ರೀಂ ಕೋರ್ಟು ಎಲ್ಲ ಹರೆಯದ ಯುವತಿಯರಿಗೆ ಶಬರಿಮಲೆಗೆ ಪ್ರವೇಶಾನುಮತಿ ಕಲ್ಪಿಸಿ ನಿಡಿರುವ ತೀರ್ಪಿಗೆ ಯಾವುದೇ ತಡೆಯಾಜ್ಞೆ ನೀಡದಿರುವುದರಿಂದ, ಮತ್ತೆ ಯುವತಿಯರು ಶಬರಿಮಲೆ ಸಂದರ್ಶನಕ್ಕೆ ಆಗಮಿಸುವ ಸಾಧ್ಯತೆ ಹೆಚ್ಚಾಗಿದೆ. ನವೆಂಬರ್ 16ರಿಂದ ಮಂಡಲ ಪೂಜಾ ಮಹೋತ್ಸವಕ್ಕಾಗಿ ಗರ್ಭಗುಡಿ ಬಾಗಿಲು ತೆರೆಯಲಿದ್ದು, ಭಕ್ತಾದಿಗಳಲ್ಲಿ ಮತ್ತೆ ತಲ್ಲಣ ಉಂಟಾಗಿದೆ.
ಬಿಗು ಬಂದೋಬಸ್ತ್:
ಸುಪ್ರೀಂ ಕೋರ್ಟು ತೀರ್ಪಿನ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಮತ್ತೆ ಸುರಕ್ಷಾ ವ್ಯವಸ್ಥೆ ಬಿಗುಗೊಳಿಸಲಾಗುತ್ತಿದೆ. ಇದು ಪೊಲೀಸರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಕಳೆದಬಾರಿ ಮಂಡಲ ಪೂಜಾ ಮಹೋತ್ಸವದ ಸಂದರ್ಭ ಆರಂಭಗೊಂಡ ಭಕ್ತಾದಿಗಳ ಪ್ರತಿಭಟನೆ ಕಾವು ಆರುವ ಮೊದಲೇ ಮತ್ತೆ ಶಬರಿಮಲೆಯಲ್ಲಿ ಖಾಕಿ ಪಡೆ ಸದ್ದುಮಾಡಲಾರಂಭಿಸಿದೆ. ಕಳೆದಬಾರಿ ಭಕ್ತಾದಿಗಳ ಭಾರೀ ಪ್ರತಿಭಟನೆಯಿಂದ ದರ್ಶನ ಸಾಧ್ಯವಾಗದೆ ವಾಪಾಸು ತೆರಳಿದ್ದ ಮುಂಬಯಿಯ ತೃಪ್ತೀ ದೇಸಾಯಿ ಸಹಿತ ಮಹಿಳಾ ಹೋರಾಟಗಾರ್ತಿಯರು ಈಬಾರಿ ಮತ್ತೆ ಶಬರಿಮಲೆ ದರ್ಶನಕ್ಕೆ ಆಗಮಿಸುವ ಇಂಗಿತ ವ್ಯಕ್ತಪಡಿಸಿರುವುದು ಪೊಲೀಸರಲ್ಲಿ ಆತಂಕ ಸೃಷ್ಟಿಸಿದೆ. ಕೇರಳ ಮತ್ತು ಇತರ ರಾಜ್ಯಗಳ ಮಹಿಳಾ ಹೋರಾಟಗಾರ್ತಿಯರು ಶಬರಿಮಲೆ ದರ್ಶನಕ್ಕೆ ಆಗಮಿಸುವ ಬಗ್ಗೆ ಇಂಟೆಲಿಜೆನ್ಸ್ ವಿಭಾಗವೂ ಸೂಚನೆ ನೀಡಿದೆ. ಜನವರಿ 15ರಂದು ಮಕರಜ್ಯೋತಿ ಕಾಣಿಸಲಿದ್ದು, ಉತ್ಸವದ ನಂತರ ಜ. 20ರಂದು ಗರ್ಭಗುಡಿ ಬಾಗಿಲು ಮುಚ್ಚಲಾಗುವುದು.