ಕಾಸರಗೋಡು: ನಿರಂತರ ಮೂರು ತಿಂಗಳ ತನಕ ಪಡಿತರ ಪಡೆಯದ ಆದ್ಯತಾ ಮತ್ತ ಅಂತ್ಯೋದಯ ವಿಭಾಗಕ್ಕೊಳಪಟ್ಟ ಪಡಿತರ ಕಾರ್ಡುದಾರರನ್ನು ಆದ್ಯತೇತರ ವಿಭಾಗಕ್ಕೆ ವರ್ಗಾಯಿಸುವ ಕ್ರಮಕ್ಕೆ ರಾಜ್ಯ ಸಾರ್ವಜನಿಕ ನಾಗರಿಕ ಪೂರೈಕೆ ಇಲಾಖೆ ಈಗಾಗಲೇ ಚಾಲನೆ ನೀಡಿದೆ.
ಇದರಂತೆ ರಾಜ್ಯದ ಈ ಎರಡು ವಿಭಾಗಗಳಿಗೆ ಸೇರಿದ ಒಟ್ಟು ೨೩,೯೮೨ ಕುಟುಂಬಗಳನ್ನು ಆದ್ಯತೇತರ ವಿಭಾಗಕ್ಕೆ ಈಗಾಗಲೇ ವರ್ಗಾಹಿಸಲಾಗಿದೆ. ಈ ಎರಡು ವಿಭಾಗದವರು ಪಡಿತರ ಸಾಮಗ್ರಿಗಳನ್ನು ಪಡೆಯದಿದ್ದಲ್ಲಿ ಅವರನ್ನು ಆದ್ಯತೇತರ ವಿಭಾಗಕ್ಕೆ ವರ್ಗಾಯಿಸಲಾಗುತ್ತಿದೆ.
ಆದ್ಯತಾ ವಿಭಾಗಕ್ಕೆ ಸೇರಿದ ೫೨,೭೦೮ ಕುಟುಂಬಗಳು ಮತ್ತು ಅಂತ್ಯೋದಯ (ಎಎವೈ) ವಿಭಾಗಕ್ಕೆ ಸೇರಿದ ೬೦೦೪ ಕುಟುಂಬಗಳು ಸೇರಿದಂತೆ ೫೮,೭೧೨ ಕುಟುಂಬಗಳು ಕಳೆದ ಮೂರು ತಿಂಗಳಿನಿAದ ಪಡಿತರ ಸಾಮಗ್ರಿ ಪಡೆದಿಲ್ಲ ಎಂದು ನಾಗರಿಕ ಪೂರೈಕೆ ನಡೆಸಿದ ಪರಿಶೀಲನೆಯಲ್ಲಿ ಗುರುತಿಸಲಾಗಿದೆ. ಇದರಲ್ಲಿ ಕಾಸರಗೋಡು ಜಿಲ್ಲೆಯ ೧೦,೯೯೨ ಕುಟುಂಬಗಳೂ ಒಳಗೊಂಡಿವೆ. ವಾಸ್ತವತೆಯನ್ನು ಮರೆಮಾಚಿ ಆದ್ಯತಾ ವಿಭಾಗದಲ್ಲಿ ಅನರ್ಹವಾಗಿ ಸೇರ್ಪಡೆಗೊಂಡವರ ಯಾದಿಯನ್ನು ಇನ್ನೊಂದೆಡೆ ಇಲಾಖೆ ನಡೆಸುತ್ತಿದೆ. ಹೀಗೆ ಆದ್ಯತಾ ಯಾದಿಯಲ್ಲಿ ಸೇರ್ಪಡೆಗೊಂಡು ಪಡಿತರ ಸಾಮಗ್ರಿಗಳನ್ನು ಪಡೆಯುವುದರಿಂದ ದಂಡವನ್ನು ಇಲಾಖೆ ವಸೂಲು ಮಾಡ ತೊಡಗಿದೆ. ಹೀಗೆ ಈ ವತಿಯಿಂದ ಈ ತನಕ ೭೦.೩೦ ಲಕ್ಷ ರೂ. ದಂಡ ರೂಪದಲ್ಲಿ ಇಲಾಖೆ ಈಗಾಗಲೇ ವಸೂಲು ಮಾಡಿದೆ.