ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಮಂಜೂರುಗೊಳಿಸಿದ ಯೋಜನೆಯಾದ ಮಳೆನೀರು ರಿಚಾರ್ಜ್ ಯೋಜನೆಯನ್ನು ಉಪೇಕ್ಷಿಸಲು ಯುಡಿಎಫ್ ಆಡಳಿತ ನಡೆಸಿದ ಪ್ರಯತ್ನಗಳು ಕೊನೆಗೂ ವಿಫಲಗೊಂಡಿದೆ. ಸುಮಾರು ಒಂದು ವರುಷಗಳಿಂದ ಇದನ್ನು ಜಾರಿಗೊಳಿಸಬೇಕೆಂದು ಪಂಚಾಯತಿ ಮಾಜಿ ಅಧ್ಯಕ್ಷೆ ರೂಪವಾಣಿ ಆರ್ ಭಟ್ ನಿರಂತರವಾಗಿ ಒತ್ತಡ ಹೇರಿದ್ದರು. ಜಾಣ ಕಿವುಡರಂತೆ ವರ್ತಿಸಿದ ಹಾಲಿ ಅಧ್ಯಕ್ಷೆ ಬೇರೆ ದಾರಿ ಕಾಣದೆ ಯೋಜನೆಯನ್ನು ಜಾರಿಗೊಳಿಸಲು ಇದೀಗ ಒಪ್ಪಿಗೆ ಸೂಚಿಸಿದ್ದಾರೆ.
ಇತ್ತೀಚೆಗೆ ನಡೆದ ಆಡಳಿತ ಸಮಿತಿಯ ಸಭೆಯಲ್ಲಿ ಯೋಜನೆಯನ್ನು ಜಿಲ್ಲಾ ಯೋಜನಾ ಸಮಿತಿಯ ಅಂಗೀಕಾರಕ್ಕಾಗಿ ಕಳುಹಿಸಲು ನಿರ್ಧರಿಸಿರುವುದು ಬಿಜೆಪಿ ಜನಪ್ರತಿನಿಧಿಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೇಸಿಗೆಯಲ್ಲಿ ಅತಿ ಹೆಚ್ಚು ನೀರಿನ ಕ್ಷಾಮವನ್ನು ಅನುಭವಿಸುವ ಎಣ್ಮಕಜೆ ಪಂಚಾಯತಿಯ ಜನತೆಗೆ ಶಾಶ್ವತ ಪರಿಹಾರಕ್ಕಾಗಿ ಆಗಿನ ಅಧ್ಯಕ್ಷೆಯಾಗಿದ್ದ ರೂಪವಾಣಿ ಆರ್ ಭಟ್ ಅವರು ಬ್ಲಾಕ್ ಪಂಚಾಯತಿ, ಜಿಲ್ಲಾ ಪಂಚಾಯತಿ ಸಭೆಗಳಲ್ಲಿ ಮಾಡಿದ ವಿನಂತಿಯ ಪ್ರಕಾರ ೨೦ ಲಕ್ಷಕ್ಕೂ ಮೇಲ್ಪಟ್ಟ ಅನುದಾನ ಲಭಿಸಿದ್ದು ಈ ಮಳೆಗಾಲದ ಸಮಯದಲ್ಲಿ ಜಾರಿಗೊಳಿಸುವ ಎಲ್ಲ ಅವಕಾಶಗಳಿದ್ದರೂ ಉಪೇಕ್ಷಿಸಲು ಪ್ರಯತ್ನಿಸಿದ ಹಾಲಿ ಅಧ್ಯಕ್ಷೆ ಹಾಗೂ ಯುಡಿಎಫ್ ಪಂಚಾಯತಿ ಅನುದಾನವನ್ನು ಬಳಸಿ ಇನ್ನಾದರೂ ಜಾರಿಗೊಳಿಸಲು ಸಮ್ಮತಿ ನೀಡಿದುದು ಬಿಜೆಪಿ ಜನಪ್ರತಿನಿಧಿಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಅಭಿಪ್ರಾಯಪಡಲಾಗಿದೆ. ಮುಂದಿನ ದಿನಗಳಲ್ಲಾದರೂ ಇದನ್ನು ಸಮರೋಪಾದಿಯಲ್ಲಿ ಜಾರಿಗೊಳಿಸಿದರೆ ಮುಂದಿನ ಮಳೆಗಾಲದಲ್ಲಿ ಇದರ ಪ್ರಯೋಜನ ಲಭಿಸಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಸಂಬAಧಪಟ್ಟವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.