ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಸುಪ್ರೀಂ ಕೋರ್ಟ್ ಇದೇ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದೆ.
ರಫೇಲ್ ಡೀಲ್ ಕುರಿತಂತೆ ಕಾಂಗ್ರೆಸ್ ಮತ್ತು ಕೇಂದ್ರ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ರಫೇಲ್ ಡೀಲ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸುತ್ತಾ ಬಂದಿದ್ದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚೌಕಿದಾರ್ ಚೋರ್ ಹೈ ಎಂದು ರ್ಯಾಲಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಬಂದಿದ್ದರು.
ಕಳೆದ ಏಪ್ರಿಲ್ 30ರಂದು ನಡೆದಿದ್ದ ವಿಚಾರಣೆಯಲ್ಲಿ 'ಚೌಕಿದಾರ್ ಚೋರ್' ಹೇಳಿಕೆ ಸಂಬಂಧ ಸುಪ್ರೀಂಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ನ್ಯಾಯಪೀಠದ ಮುಂದೆ ಕ್ಷಮೆ ಕೋರಿದ್ದರು. ಆದರೆ ತಮ್ಮ ಹೇಳಿಕೆ ಕುರಿತು ನೇರವಾಗಿ ತಪೆÇ್ಪಪ್ಪಿಕೊಳ್ಳದ ರಾಹುಲ್ ಗಾಂಧಿ ಅವರ ನಡೆ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ವೇಳೆ, ಸಿಜೆಐ ರಂಜನ್ ಗೊಗೊಯಿ ನೇತೃತ್ವದ ಪೀಠವು, 'ನೀವು ತಪ್ಪು ಮಾಡಿದ್ದರೆ, ಒಪ್ಪಿಕೊಳ್ಳಬೇಕು.. ಪ್ರಮಾಣಪತ್ರದಲ್ಲಿನ ನಿಮ್ಮ ಸಮರ್ಥನೆಗಳನ್ನು ಅರ್ಥ ಮಾಡಿಕೊಳ್ಳುವುದು ನಮಗೆ ಕಷ್ಟವಾಗುತ್ತಿದೆ. ಪ್ರಮಾಣಪತ್ರದಲ್ಲಿ ಉಲ್ಲೇಖಿಸಿರುವ ರಾಜಕೀಯ ನಿಲುವುಗಳು ನಮಗೆ ಸಂಬಂಧವಿಲ್ಲದ್ದು.. ನಮ್ಮ ತೀರ್ಪಿನಲ್ಲಿ ಚೌಕಿದಾರ್ ಚೋರ್ ಎಂದು ಎಲ್ಲಿ ಹೇಳಿದ್ದೇವೆ? ಎಲ್ಲ ಹೇಳಿಕೆಗಳನ್ನು ಪೀಠವೇ ಹೇಳಿದೆ ಎಂದು ನೀವು ಹೇಗೆ ಹೇಳುತ್ತೀರಿ.. ಎಂದು ಪ್ರಶ್ನಿಸಿದ್ದರು. ಅಲ್ಲದೆ ರಾಹುಲ್ ಗಾಂಧಿ ಅವರು ಸಲ್ಲಿಕೆ ಮಾಡಿರುವ ಪ್ರಮಾಣ ಪತ್ರದ ಕುರಿತೂ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್, 'ಪ್ರಮಾಣಪತ್ರದಲ್ಲಿ ಬಳಸಿರುವ 'ವಿಷಾದ' ಪದದ ಅರ್ಥವೇನು?.. ಕಾಂಗ್ರೆಸ್ ಅಧ್ಯಕ್ಷರು ಒಂದು ಹಂತದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಇನ್ನೊಂದೆಡೆ ನಿಂದನೆಯ ಹೇಳಿಕೆ ನೀಡಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
ಈ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದೆ. ರಾಹುಲ್ ಗಾಂಧಿ ಹೇಳಿಕೆ ದುರಾದುಷ್ಟಕರ. ಇನ್ನು ಮುಂದಾದರೂ ಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿ ಎಂದು ಹೇಳಿದೆ. ಜೊತೆಗೆ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟಿದೆ. ಇನ್ನೊಂದೆಡೆ ರಫೇಲ್ ಡೀಲ್ ಪ್ರಕರಣ ಸಂಬಂಧ ಕೇಂದ್ರ ಸರ್ಕಾರಕ್ಕೆ ನೀಡಿದ್ದ ಕ್ಲೀನ್ ಚೀಟ್ ಪ್ರಶ್ನಿಸಿ ಅರುಣ್ ಶೌರಿ, ಯಶ್ವಂತ್ ಸಿನ್ಹಾ ಮತ್ತು ಕಾರ್ಯಕರ್ತ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು ಈ ಮೂಲಕ ರಫೇಲ್ ಯುದ್ಧ ವಿಮಾನ ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ.