ಕಾಸರಗೋಡು: ಶಬರಿಮಲೆಯ ಆಚಾರ, ಅನುಷ್ಠಾನಗಳಿಗೆ ವಿರುದ್ಧವಾಗಿ ಯುವತಿಯರ ಪ್ರವೇಶಕ್ಕೆ ಸರ್ಕಾರ ಪ್ರೋತ್ಸಾಹ ನೀಡಬಾರದು ಎಂದು ಬಿಜೆಪಿ ಮುಖಂಡ ಕುಮ್ಮನಂ ರಾಜಶೇಖರನ್ ತಿಳಿಸಿದ್ದಾರೆ. ಸುಪ್ರೀಂ ಕೋರ್ಟು ಪ್ರಸಕ್ತ ಏಳು ಮಂದಿ ಸದಸ್ಯ ಪೀಠಕ್ಕೆ ವರ್ಗಾಯಿಸಿ ನೀಡಿರುವ ತೀರ್ಪನ್ನು, ಯುವತಿಯರ ಪ್ರವೇಶಕ್ಕೆ ಅನುಮತಿ ಎಂದು ತಪ್ಪಾಗಿ ವ್ಯಾಖ್ಯಾನಿಸಕೂಡದು. ಶಬರಿಮಲೆಗೆ ಯುವತಿಯರ ಪ್ರವೇಶ ಕೂಡದು ಎಂದು ಪುನರುಚ್ಛರಿಸಿದರು.
ಪ್ರಕರಣವನ್ನು ವಿಸ್ತøತ ಪೀಠಕ್ಕೆ ವರ್ಗಾಯಿಸಿರುವ ಹಿನ್ನೆಲೆಯಲ್ಲಿ ಕ್ರಾಂತಿಕಾರಿಗಳನ್ನು ಶಬರಿಮಲೆಗೆ ಕಳುಹಿಸಲು ಪಿಣರಾಯಿ ವಿಜಯನ್ ಶ್ರಮಿಸದಿರುವುದು ಉತ್ತಮ. ಯುವತಿಯರ ಪ್ರವೇಶಕ್ಕೆ ಸ್ಟೇ ನೀಡಿಲ್ಲ ಎಂಬ ಕಾರಣಕ್ಕೆ, ಯುವತಿಯರ ಪ್ರವೇಶಕ್ಕೆ ಸರ್ಕಾರ ಅನುವುಮಾಡಿಕೊಟ್ಟಲ್ಲಿ, ಇದನ್ನು ಆಚಾರ ವಿಶ್ವಾಸಿಗಳು ತಡೆಯಲಿದ್ದಾರೆ. ಶಬರಿಮಲೆಗೆ ಮತ್ತೆ ಯುವತಿಯರ ಪ್ರವೇಶಕ್ಕೆ ಪ್ರೋತ್ಸಾಹ ನೀಡಿದಲ್ಲಿ,ಸರ್ಕಾರದ ವಿರುದ್ಧ ಪ್ರಬಲವಾದ ಪ್ರತಿಭಟನೆ ಮುಂದುವರಿಯುವ ಸಾಧ್ಯತೆಯಿರುವುದಾಗಿ ಬಿಜೆಪಿ ಮುಖಂಡ, ವಕೀಲ ಬಿ.ಗೋಪಾಲಕೃಷ್ಣ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟು ತೀರ್ಪನ್ನು ಸ್ವಾಗತಿಸಿರುವ ಕಾಂಗ್ರೆಸ್ ಕೇರಳ ಘಟಕ, ಶಬರಿಮಲೆ ಆಚಾರ ಅನುಷ್ಠಾನಕ್ಕೆ ವಿರುದ್ಧವಾಗಿ ಯುವತಿಯರನ್ನು ಪೊಲೀಸ್ ಸಹಾಯದಿಂದ ಶಬರಿಮಲೆಗೆ ತಲುಪಿಸದಂತೆ ಪ್ರತಿಪಕ್ಷ ಮುಖಂಡ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ. ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸುವುದಾಗಿ ತಿಳಿಸಿದೆ. ಮುಜರಾಯಿ ಖಾತೆ ಸಚಿವ ಕಡಗಂಪಳ್ಳಿ ಸುರೇಂದ್ರನ್, ಶಬರಿಮಲೆ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯ ಲಾಭ ಗಳಿಸಲು ಯತ್ನಿಸುತ್ತಿರುವುದಾಗಿ ಟೀಕಿಸಿದರು.
ಶಬರಿಮಲೆ ಪ್ರಕರಣವನ್ನು ಸಪ್ತಸದಸ್ಯರ ಪೀಠಕ್ಕೆ ವರ್ಗಾಯಿಸಿರುವ ಸುಪ್ರೀಂಕೋರ್ಟು ಕ್ರಮವನ್ನು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯೆ ಶೋಭಾಸುರೇಂದ್ರನ್ ಸ್ವಾಗತಿಸಿದ್ದು, ಸರ್ಕಾರ ಮತ್ತು ಪಿಣರಾಯಿ ವಿಜಯನ್ ಪಕ್ಷದ ಕಾರ್ಯಕರ್ತರು, ಶಬರಿಮಲೆಗೆ ಹೋರಾಟಗಾರ್ತಿಯರನ್ನು ಮಾರುವೇಷದಲ್ಲಿ ಪ್ರವೇಶಿಸಲು ಯತ್ನಿಸಿದಲ್ಲಿ, ಬಿಜೆಪಿ ಪ್ರಬಲವಾಗಿ ಎದುರಿಸಲಿದೆ ಎಂದು ತಿಳಿಸಿದ್ದಾರೆ.