ಬದಿಯಡ್ಕ: ಕುಂಬ್ಡಾಜೆ ಗ್ರಾಮಪಂಚಾಯಿತಿ ಅಗಲ್ಪಾಡಿಯ ಹಳೆ ಪಂಚಾಯಿತಿ ಕಚೇರಿ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಜರಗಿದ ರೋಗ ತಪಾಸಣಾ ಶಿಬಿರವನ್ನು ಗ್ರಾ.ಪಂ. ಸದಸ್ಯ ಶಶಿಧರ ತೆಕ್ಕೆಮೂಲೆ ಉದ್ಘಾಟಿಸಿದರು. ಅವರು ಮಾತನಾಡಿ ನಮ್ಮ ಮಕ್ಕಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಕೆಲವೊಂದು ತ್ಯಾಗಕ್ಕೆ ಸಿದ್ಧರಾಗಬೇಕು. ಫಾಸ್ಟ್ ಫುಡ್, ಜಂಕ್ ಫುಡ್‌ಗಳ ದಾಸರಾಗುವುದರಿಂದ ದೇಹ ರೋಗದ ಗೂಡಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಆರೋಗ್ಯಪೂರ್ಣ ಜೀವನದತ್ತ ನಮ್ಮ ದೈನಂದಿನ ಚಟುವಟಿಕೆಗಳು ನಡೆಯುತ್ತಿರಬೇಕು ಎಂದು ಅವರು ಹೇಳಿದರು.
ಕುಂಬ್ಡಾಜೆ ಗ್ರಾಮಪಂಚಾಯಿತಿ ಆರೋಗ್ಯ ಅಧಿಕಾರಿ ಡಾ. ಸುಹೈಲ್ ತಂಙಳ್ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿ ಮಾತನಾಡಿ ಸಾವಯವ ತರಕಾರಿಯನ್ನು ನಿತ್ಯಜೀವನದಲ್ಲಿ ಬಳಸುವುದರಿಂದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಾಧ್ಯ. ವಿಷಮುಕ್ತ ಆಹಾರ ಸೇವನೆಯನ್ನು ರೂಢಿಸಿಕೊಳ್ಳಬೇಕು. ಪ್ರತೀ ಮನೆಯಲ್ಲಿ ತರಕಾರಿ ಉತ್ಪನ್ನಗಳನ್ನು ಬೆಳೆಸಲು ಮುತುವರ್ಜಿವಹಿಸಬೇಕು ಎಂದು ತಿಳಿಸಿದ ಅವರು ಪಾಲ್ಗೊಂಡವರ ತಪಾಸಣೆಗೈದರು. ಎಚ್.ಎಂ.ಸಿ. ಸದಸ್ಯ ಈಶ್ವರ ರಾವ್ ಮೈಲ್ತೊಟ್ಟಿ ಶುಭಾಶಂಸನೆಗೈದರು. ಆರೋಗ್ಯ ಪರಿವೀಕ್ಷಕ ಗೋಪಾಲಕೃಷ್ಣ ಸ್ವಾಗತಿಸಿ, ಆರೋಗ್ಯ ಇಲಾಖೆಯ ಶಾಲಿನಿ ವಂದಿಸಿದರು. ಉದ್ಯೋಗ ಖಾತರಿ ಯೋಜನೆಯ ಸದಸ್ಯರು, ಕುಟುಂಬಶ್ರೀ ಸದಸ್ಯರು ಹಾಗೂ ಊರವರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.