ತಿರುವನಂತಪುರ: ಶಬರಿಮಲೆ ತೀರ್ಥಯಾತ್ರೆ ಡಿಸೆಂಬರ್ ತಿಂಗಳಲ್ಲಿ ಆರಂಭಗೊಳ್ಳಲಿದ್ದು, ಭಕ್ತಾದಿಗಳಿಗೆ ಶ್ರೀದೇವರ ಸುಗಮ ದರ್ಶನಕ್ಕಾಗಿ ಪೊಲೀಸ್ ಇಲಾಖೆಯ ವರ್ಚುವಲ್ ಕ್ಯೂ ಬುಕ್ಕಿಂಗ್‍ಗೆ ಚಾಲನೆ ನೀಡಲಾಗಿದೆ. ಭಕ್ತಾದಿಗಳ ದಟ್ಟಣೆ ಕಡಿಮೆಮಾಡುವುದರ ಜತೆಗೆ ಸುಗಮ ದರ್ಶನಕ್ಕೆ ವ್ಯವಸ್ಥೆಮಾಡಿಕೊಡುವ ನಿಟ್ಟಿನಲ್ಲಿ ವರ್ಚುವಲ್ ಕ್ಯೂ ಬುಕ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಕೇರಳ ಪೊಲೀಸ್ ಇಲಾಖೆ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ ಸಹಕಾರದೊಂದಿಗೆ ವರ್ಚುವಲ್ ಕ್ಯೂ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಈ ಮೂಲಕ ಭಕ್ತಾದಿಗಳಿಗೆ ಸುಗಮ ದರ್ಶನದೊಂದಿಗೆ ಇತರ ಸೇವೆಗಳೂ ಲಭ್ಯವಾಗಲಿದೆ.
ವರ್ಚುವಲ್ ಕ್ಯೂ ಹಾಗೂ ಶಬರಿಮಲೆಯ ಇತರ ಸೇವೆಗಳಿಗಾಗಿ 'www.sabarimalaonline.com'ಎಂಬ ವೆಬ್‍ಸೈಟ್ ಮೂಲಕ ಭಕ್ತಾದಿಗಳು ಹೆಸರು ನೋಂದಾಯಿಸಬಹುದಾಗಿದೆ. ಶಬರಿಮಲೆಯ ಅಪ್ಪ, ಅರವಣ, ವಿಭೂತಿ, ತುಪ್ಪ ಸಹಿತ ಪ್ರಸಾದ, ಕೆಎಸ್ಸಾರ್ಟಿಸಿ ಬಸ್ ಟಿಕೆಟ್ ಬುಕ್ಕಿಂಗ್ಗೂ ವೆಬ್‍ಸೈಟ್ ಪೋರ್ಟಲ್ ಬಳಸಿಕೊಳ್ಳಬಹುದಾಗಿದೆ. ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ನಡೆಸುವವರಿಗೆ ಚಂದ್ರನಂದನ ರಸ್ತೆ ಮೂಲಕ ಶಬರಿಮಲೆ ಸನ್ನಿದಾನಕ್ಕೆ ತಲುಪಿ, ಶ್ರೀದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾತ್ರಾರ್ಥಿಗಳ ಹೆಸರು, ಪ್ರಾಯ, ಫೋಟೋ, ಪೂರ್ಣ ವಿಳಾಸದೊಂದಿಗೆ ಫೋಟೋ ಅಳವಡಿಸಿದ ಅಧಿಕೃತ ಗುರುತಿನ ಚೀಟಿ, ಮೊಬೈಲ್ ನಂಬರ್ ಸಹಿತ ಮಾಹಿತಿ ಅಪ್‍ಲೋಡ್ ಮಾಡಬೇಕು. ಈ ರೀತಿ ಬುಕ್ಕಿಂಗ್ ನಡೆಸುವ ಯಾತ್ರಾರ್ಥಿಗಳ ಸಂಪೂರ್ಣ ಮಾಹಿತಿಯನ್ನು ದೇವಸ್ವಂ ಬೋರ್ಡ್ ಪ್ರತ್ಯೇಕವಾಘಿ ದಾಖಲಿಸಿಕೊಳ್ಳಲಿದೆ. ಆನ್‍ಲೈನ್ ಬುಕ್ಕಿಂಗ್ ನಡೆಸದವರಿಗೆ ಪ್ರಸಾದ ವಿತರಣೆಗೆ ಸನ್ನಿದಾನದ ಬಳಿ ಪ್ರತ್ಯೇಕ ಕೌಂಟರ್ ತೆರೆಯಲಾಗುವುದು ಎಂದೂ ದೇವಸ್ವಂ ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.