ಉಪ್ಪಳ: ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಎಳೆವೆಯಲ್ಲಿಯೇ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅದಕ್ಕೆ ಅಗತ್ಯ ಪ್ರೋತ್ಸಾಹವನ್ನು ನೀಡಿದರೆ ಖಂಡಿತವಾಗಿಯೂ ಮುಂದೆ ಅವರು ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವುದರಲ್ಲಿ ಸಂಶಯವಿಲ್ಲ ಎಂದು ಹಿರಿಯ ಸಾಹಿತಿ ಶೀಕೃಷ್ಣಯ್ಯ ಅನಂತಪುರ ಅಭಿಪ್ರಾಯ ಪಟ್ಟರು.
ಮಂಜೇಶ್ವರ ಉಪಜಿಲ್ಲಾ ವಿದ್ಯಾರಂಗ ಸಾಹಿತ್ಯೋತ್ಸವದ ನೇತೃತ್ವದಲ್ಲಿ ಬಾಯಾರು ಹೆದ್ದಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಕ್ಕಳ ಸಂಪಾದಿತ ಕವನ ಸಂಕಲನ ಮಿಠಾಯಿ ಡಬ್ಬವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಧಾರಾಳ ಅವಕಾಶಗಳಿದೆ, ಈ ಅವಕಾಶಗಳನ್ನು ಒದಗಿಸುವ ಕೆಲಸವನ್ನು ಅಧ್ಯಾಪಕರು ಮಾಡಬೇಕು. ಆ ಮೂಲಕ ಅವರೊಳಗಿನ ಪ್ರತಿಭೆಗಳು ಅನಾವರಣಗೊಳ್ಳುವುದೆಂದು ಕಾರ್ಯಕ್ರಮ ಉದ್ಘಾಟನೆಗೊಳಿಸಿದ ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಜೆ ಶೆಟ್ಟಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ ವಹಿಸಿದ್ದರು. ಮಂಜೇಶ್ವರ ಬಿ.ಆರ್.ಸಿಯ ಬ್ಲಾಕ್ ನಿರೂಪಣಾಧಿಕಾರಿ ಗುರುಪ್ರಸಾದ್ ರೈ, ತುಳು ಕನ್ನಡ ಕಥೆಗಾರ್ತಿ ಕರ್ನಾಟಕ ತುಳು ಸಾಹಿತ್ಯ ಪುಸ್ತಕ ಪ್ರಶಸ್ತಿ ವಿಜೇತೆ ರಾಜಶ್ರೀ ಟಿ. ರೈ, ಗ್ರಾ.ಪಂ. ಸದಸ್ಯೆ ಭವ್ಯ ಬಿ., ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ವಸಂತಿ .ಬಿ., ಶಾಲಾ ಸಂಚಾಲಕ ರಾಜೇಶ್ ಎನ್, ಹಳೆ ವಿದ್ಯಾರ್ಥಿ ಸಂಘದ ಆಧ್ಯಕ್ಷ ಮೋನಪ್ಪ ಶೆಟ್ಟಿ ಕೆ., ಮಾತೃಸಂಘದ ಅಧ್ಯಕ್ಷೆ ಗೀತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹೆದ್ದಾರಿ ಶಾಲಾ ಮುಖ್ಯೋಪಾಧ್ಯಾಯ ಆದಿನಾರಾಯಣ ಭಟ್ ಸ್ವಾಗತಿಸಿ, ವಿದ್ಯಾರಂಗ ವೇದಿಕೆಯ ಸಂಚಾಲಕ ಹರೀಶ್ ಸುಲಾಯ ಒಡ್ಡಂಬೆಟ್ಟು ವಂದಿಸಿದರು. ಶಿಕ್ಷಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು.