ಕಾಸರಗೋಡು: ಕಟ್ಟತ್ತಡ್ಕ ಆನೋಡಿಪಳ್ಳದಲ್ಲಿ ಸೀತಾಂಗೋಳಿ ಸರಕಾರಿ ಐಟಿಐಗೆ ನೂತನವಾಗಿ ನಿರ್ಮಿಸಲಾದ ಕಟ್ಟಡದ ಕಮಾನಿನಲ್ಲಿ ಕೇವಲ ಮಲೆಯಾಳದಲ್ಲಿ ಮಾತ್ರ ಸಂಸ್ಥೆಯ ಹೆಸರನ್ನು ಬರೆದಿರುವುದನ್ನು ಖಂಡಿಸಿ ಕನ್ನಡದಲ್ಲೂ ಸಂಸ್ಥೆಯ ಹೆಸರನ್ನು ಶಾಶ್ವತ ಕಮಾನಿನಲ್ಲಿ ನಮೂದಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಸಂಬAಧಪಟ್ಟ ಅಧಿಕಾರಿ ವರ್ಗಕ್ಕೆ ಮುನ್ನೆಚ್ಚರಿಕೆ ನೀಡಿದ್ದಾರೆ.
ಪ್ರಸ್ತುತ ಸಂಸ್ಥೆಯ ನೂತನ ಕಟ್ಟಡವನ್ನು ಪರಿಶೀಲಿಸಿದ ಅವರು ಪ್ರವೇಶ ಕಮಾನಿನಲ್ಲಿ ಕನ್ನಡವನ್ನು ಅವಗಣಿಸಿರುವುದನ್ನು ತೀವ್ರವಾಗಿ ಖಂಡಿಸಿದರು.
ನಾನು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇನೆ. ಭಾಷೆಗಳ ಮಧ್ಯೆ ಸಂಘರ್ಷ ಮೂಡಿಸುವುದು ನನ್ನ ಉದ್ದೇಶವಲ್ಲ. ಆದರೆ ಇದು ಅಚ್ಚ ಕನ್ನಡ ನೆಲೆ. ಬಹುಪಾಲು ವಿದ್ಯಾರ್ಥಿಗಳು ಕನ್ನಡಿಗರಾಗಿದ್ದಾರೆ. ನೂತನವಾಗಿ ಚುನಾಯಿತರಾದ ಶಾಸಕ ಕಮರುದ್ದೀನ್ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೂ ಇಲ್ಲಿ ಕನ್ನಡದ ಕಗ್ಗೊಲೆ ನಡೆಯುತ್ತಿರುವುದು ದುರ್ದೈವವಾಗಿದೆ. ಕನ್ನಡದ ಮೇಲೆ ಪ್ರಾಮಾಣಿಕ ಕಾಳಜಿ ಇದ್ದರೆ ಕೂಡಲೇ ಶಾಸಕರೂ ಇತ್ತ ಗಮನ ಹರಿಸಲಿ. ಶಾಶ್ವತ ಕಮಾನಿನಲ್ಲಿ ಸಂಸ್ಥೆಯ ಹೆಸರನ್ನು ಕನ್ನಡದಲ್ಲೂ ನಮೂದಿಸಬೇಕು. ಮಾತ್ರವಲ್ಲದೆ ಕನ್ನಡ ಅಧ್ಯಾಪಕರನ್ನೂ ಇಲ್ಲಿ ನೇಮಿಸಬೇಕು. ಇಲ್ಲದಿದ್ದರೆ ಸಮಸ್ತ ಜನತೆಯನ್ನು ಒಗ್ಗೂಡಿಸಿಕೊಂಡು ಉಗ್ರ ಹೋರಾಟ ನಡೆಸುವುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮುನ್ನೆಚ್ಚರಿಕೆ ನೀಡಿದ್ದಾರೆ.