ಪೆರ್ಲ: ಹೋರಾಟದ ಬದುಕನ್ನು ರೂಢಿಸಿಕೊಂಡಾಗ ಕಾಸರಗೋಡಿನಲ್ಲಿ ಕನ್ನಡದ ಹಿತರಕ್ಷಣೆ ಸಾಧ್ಯ. ಕಾಸರಗೋಡಿನ ಕನ್ನಡಿಗರು ನಿರಂತರ ಪರಿಶ್ರಮ, ಎಚ್ಚರವಹಿಸಿದರೆ ಕನ್ನಡಿಗರ ಎದುರಿರುವ ಬಹುತೇಕ ಸವಾಲುಗಳು ಇಲ್ಲವಾಗಬಹುದು ಎಂದು ಪೆರ್ಲ ಸತ್ಯನಾರಾಯಣ ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ. ಹೇಳಿದರು.
ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಘಟಕ ಶನಿವಾರ ಆಯೋಜಿಸಿದ್ದ ಕೆಟೆಟ್(ಶಿಕ್ಷಕ ಅರ್ಹತಾ ಪರೀಕ್ಷೆ) ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಅಧ್ಯಾಪಕ ನಾರಾಯಣ ರಾವ್ ಅವರು ಉಪಸ್ಥಿತರಿದ್ದು ಮಾತನಾಡಿ, ಇಂತಹ ತರಬೇತಿಯ ಜೊತೆಗೆ ನಿರಂತರ ಅಭ್ಯಾಸವೂ ಸೇರಿ ಪರೀಕ್ಷೆ ಎಲ್ಲರಿಗೂ ಶುಭಕರವಾಗಿರಲೆಂದು ಶುಭ ಹಾರೈಸಿದರು. ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ಅಧ್ಯಕ್ಷ, ಬೇಂಗಪದವು ಶಾಲಾ ಮುಖ್ಯೋಪಾಧ್ಯಾಯ ಶಿವಕುಮಾರ ಅಧ್ಯಕ್ಷತೆವಹಿಸಿದ್ದರು. ಶಶಿಕಲಾ ಅವರು ಪ್ರಾರ್ಥಿಸಿದರು. ಕೋಶಾಧಿಕಾರಿ ಶರತ್ ಕುಮಾರ್ ವಂದಿಸಿದರು. ಕಾರ್ಯದರ್ಶಿ ಶ್ರೀಶ ಪಂಜಿತ್ತಡ್ಕ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕಿ ಸುರೇಖಾ ಸಹಕರಿಸಿದರು. ಸಂಘದ ಸದಸ್ಯರು ಉಪಸ್ಥಿತರಿದ್ದರು.
ಎರಡು ದಿನಗಳ ತರಬೇತಿಯಲ್ಲಿ ೭೫ಕ್ಕೂ ಹೆಚ್ಚು ಮಂದಿ ಭಾಗವಹಿಸಿ, ಪ್ರಯೋಜನ ಪಡೆದರು. ಕನ್ನಡ ಭಾಷೆಗೆ ನಾರಾಯಣ ರಾವ್, ಶ್ರೀಧರ ಭಟ್; ಇಂಗ್ಲಿಷ್ ಭಾಷೆಗೆ ಗೀತಾ ಪೂರ್ಣಿಮ, ರವಿಶಂಕರ, ಗಣಿತಕ್ಕೆ ವೇಣುಗೋಪಾಲ, ವಿಜ್ಞಾನಕ್ಕೆ ಕೇಶವ ಪ್ರಕಾಶ, ಕೃಷ್ಣ ಪ್ರಕಾಶ್, ಸಮಾಜ ವಿಜ್ಞಾನಕ್ಕೆ ಪ್ರವೀಣ ಹಾಗೂ ಮನಃಶಾಸ್ತçಕ್ಕೆ ಸುಧೀರ್ ಕೆ.ವಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿ ನಿರ್ವಹಿಸಿ ಮೆಚ್ಚುಗೆ ಗಳಿಸಿದರು.