ಮಧೂರು: ದಾಸ ಪರಂಪರೆಯಲ್ಲಿ ಮೂಡಿಬಂದ ದಾಸ ಸಾಹಿತ್ಯದಲ್ಲಿ ತತ್ವಜ್ಞಾನ, ಆಧ್ಯಾತ್ಮಿಕ ನೆಲೆಯ ಜೊತೆ ಜೀವನ ಮೌಲ್ಯವಿದೆ. ಅಂತರಂಗವನ್ನು ಬೆಳಗಿಸುವ ಶಕ್ತಿ ಇದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳವರು ಹೇಳಿದರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ, ತಿರುಮಲ ತಿರುಪತಿ ದೇವಸ್ಥಾನಂ ದಾಸ ಸಾಹಿತ್ಯ ಪರಿಷತ್, ಕೂಡ್ಲು ಶ್ಯಾನುಭೋಗ ಸಂಗೀತ ಟ್ರಸ್ಟ್ ಬೆಂಗಳೂರು, ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಕಾಸರಗೋಡು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ ಕೇರಳ ರಾಜ್ಯ 2 ನೇ ದಾಸ ಸಾಹಿತ್ಯ ಸಮ್ಮೇಳನ ಮತ್ತು ಕಾಸರಗೋಡು ಜಿಲ್ಲಾ ಭಜನಾ ಸಾಂಸ್ಕøತಿಕ ಶಿಬಿರದ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಆಶೀರ್ವದಿಸಿ ಸ್ವಾಮೀಜಿ ಮಾತನಾಡಿದರು.
ಭಜನೆಯಲ್ಲಿ ಭಕ್ತಿ ರಸ ಬೇಕು. ಅನ್ಯ ರಸ ಬೇಡ. ಭಜನೆ ಮೂಲಕ ಜಾಗೃತಿ ಮೂಡುತ್ತದೆ ಮತ್ತು ಭಜನೆಯಿಂದ ದ್ವೇಷ ದೂರವಾಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಎಡವುತ್ತಿದ್ದೇವೆ. ಇದನ್ನು ಪರಿಹರಿಸಲು ಭಜನೆ ನೆರವಾಗುತ್ತದೆ. ಎಳವೆಯಿಂದಲೇ ಮಕ್ಕಳಿಗೆ ಮನೆಯಿಂದಲೇ ದಾಸ ಸಾಹಿತ್ಯದ ಅರಿವು ಮೂಡಿಸಬೇಕು. ಭಜನೆಯಲ್ಲಿ ತೊಡಗುವಂತೆ ಪ್ರೇರೇಪಿಸಬೇಕು. ಮಾತೆಯರು ಪರಿವರ್ತನೆಯಾದರೆ ಸಹಜವಾಗಿಯೇ ಶಾಂತಿ ನೆಲೆಗೊಳ್ಳುತ್ತದೆ ಎಂದ ಸ್ವಾಮೀಜಿ ಅವರು ಭಾಷೆ ಸಂಸ್ಕøತಿಯ ಹೃದಯವಾಗಿದೆ ಎಂದರು. ಸದಾಚಾರ ಸಂಪನ್ನತೆಗೆ ಭಜನಾ ಸಂಸ್ಕøತಿಯನ್ನು ಮಕ್ಕಳಿಗೆ ಹಸ್ತಾಂತರಿಸಲು ಹಿರಿಯರು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ, ತಿರುಮಲ ತಿರುಪತಿ ದೇವಸ್ಥಾನಂ ದಾಸ ಸಾಹಿತ್ಯ ಪ್ರಾಜೆಕ್ಟ್‍ನಂತಹ ಸಂಸ್ಥೆಗಳು ಶ್ಲಾಘನೀಯ ಕೆಲಸ ಮಾಡುತ್ತಿದೆ ಎಂದರು.
ಜೀವನ ತತ್ವವಿದೆ : ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡಬಿದಿರೆಯ ದಾಸ ಸಾಹಿತ್ಯ ಪ್ರಚಾರಕ ಅನುಪಮ ರಾಮದಾಸ ಶೆಣೈ ಅವರು ಮಾತನಾಡಿ ಸಮೃದ್ಧವಾದ ಸಾಹಿತ್ಯವನ್ನೊಳಗೊಂಡಿರುವ ದಾಸ ಸಾಹಿತ್ಯ ಜೀವನ ತತ್ವಗಳನ್ನು ಬೋಧಿಸುತ್ತದೆ. ದಾಸ ಕೀರ್ತನೆಗಳನ್ನು ಶುದ್ಧವಾಗಿ ಹಾಡಬೇಕು. ಕೀರ್ತನೆಯ ಅರ್ಥ, ಅನುಸಂಧಾನ ಅರಿತುಕೊಳ್ಳಬೇಕೆಂದರು.
ಸಮಾರಂಭದಲ್ಲಿ ಉದ್ಯಮಿ ರಾಂ ಪ್ರಸಾದ್ ಅಧ್ಯಕ್ಷತೆ ವಹಿಸಿದರು. ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಸಿ.ಎನ್. ಚಾನೆಲ್ ನಿರ್ದೇಶಕ ಪುರುಷೋತ್ತಮ ನಾೈಕ್, ಕಾಸರಗೋಡು ನಗರಸಭಾ ಸದಸ್ಯ ಕೆ.ಶಂಕರ, ಕೆ.ಲವ ಮೀಪುಗುರಿ, ಕೂಡ್ಲು ಶ್ಯಾನುಭೋಗ ಸಂಗೀತ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷೆ ವೃಂದಾ ಎಸ್.ರಾವ್, ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಕೇರಳ ರಾಜ್ಯ ದಾಸ ಸಾಹಿತ್ಯ ಪ್ರಚಾರಕ ಜಯಾನಂದ ಕುಮಾರ್ ಹೊಸದುರ್ಗ, ಶುಭಾಷ್ ಪೆರ್ಲ, ಎಂ.ಚಂದ್ರನ್ ನಾಯರ್ ಮೊದಲಾದವರು ಉಪಸ್ಥಿತರಿದ್ದರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಭಜನಾ ಸಂಸ್ಕøತಿ ಶಿಬಿರದ ಅಂಗವಾಗಿ ಖ್ಯಾತ ಗಾಯಕಿ ವೃಂದಾ ಎಸ್.ರಾವ್, ವೈಷ್ಣವ್ ರಾವ್ ಬೆಂಗಳೂರು ಮತ್ತು ಬಳಗದವರಿಂದ ಗಾನ ವೈಭವ ಜನಮನ ಸೂರೆಗೊಂಡಿತು.