ಬದಿಯಡ್ಕ: ಭಗವಾನ್ ಸತ್ಯಸಾಯಿ ಬಾಬಾ ಅವರ 94ನೇ ಜನ್ಮ ದಿನದಂಗವಾಗಿ ಕೊಡುಗೈ ದಾನಿ, ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ಕಡಮಾಡುವ ಉಚಿತ ಮನೆಗಳ ಕೀಲಿಕೈ ಹಸ್ತಾಂತರ ಭಾನುವಾರ ಕಿಳಿಂಗಾರಿನಲ್ಲಿ ನಡೆಯಿತು.
ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಉದ್ಯಮಿ ರಾಜಾರಾಮ ಶೆಣೈ ಹಾಗೂ ಸಾಹಿತಿ ಗುಣಾಜೆ ರಾಮಚಂದ್ರ ಭಟ್ ಅವರು 258 ಹಾಗೂ 259ನೇ ಮನೆಗಳ ಕೀಲಿಕೈಯನ್ನು ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರು, ಜೀವನದ ಸಾಧನೆಗಳ ಸಾಥ್ರ್ಯಕ್ಯವು ಸಮಾಜಕ್ಕೆ ನಾವೇನು ಮರಳಿಸುತ್ತೇವೆ ಎಂಬ ಸಂದೇಶದ ಮೇಲೆ ಅಡಕವಾಗಿರುತ್ತದೆ. ಸರಳ ಜೀವನ ಮತ್ತು ಗಳಿಕೆಯಲ್ಲಿ ಉಳಿಸಿ ಸಂಕಷ್ಟಕ್ಕೆ ನೆರವಾಗುವ ಹೃದಯವಂತಿಕೆ, ಪ್ರೇಮಗಳನ್ನು ಮೈಗೂಡಿಸಿಕೊಂಡಾಗ ಬದುಕು ಸಂತಸಮಯವಾಗಿರುತ್ತದೆ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್, ಕೇಶವ ಭಟ್, ಶಿವಕುಮಾರ್ ಪೈಲೂರು, ಈಶ್ವರ ಭಟ್, ಗೋಪಾಲಕೃಷ್ಣ ಬಟ್, ಡಾ.ಕೆ.ಕೆ.ನಾಯರ್ ಉಪಸ್ಥಿತರಿದ್ದು ಶುಭಹಾರೈಸಿದರು. ನಬೀಸಾ ಬದಿಯಡ್ಕ ಹಾಗೂ ದಯಾನಂದ ಕಯ್ಯಾರು ಅವರಿಗೆ ಮನೆಗಳ ಕೀಲಿಕೈ ಹಸ್ತಾಂತರಿಸಲಾಯಿತು.
ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸ್ವಾಗತಿಸಿ, ವೇಣುಗೋಪಾಲ ಕೆ.ಎನ್ ವಂದಿಸಿದರು.