ಮಂಜೇಶ್ವರ: ಗಡಿನಾಡು ಕಾಸರಗೋಡಿನ ಕನ್ನಡ ಶಾಲೆಯಾದ ಕಡಂಬಾರು ಸರ್ಕಾರಿ ಪ್ರೌಢಶಾಲೆ ಶತಮಾನಗಳ ಇತಿಹಾಸವಿರುವ ಶಾಲೆ. ಕನ್ನಡ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಸ್ತುತ ಶಾಲೆಗೆ ಬೆಂಗಳೂರಿನ ಯುವಕರ ತಂಡವೊಂದು ಇದೀಗ ಸಣ್ಣ-ಬಣ್ಣ ಬಳಿಯುವ ಮೂಲಕ ತಮ್ಮ ಕನ್ನಡ ಪ್ರೇಮವನ್ನು ಪ್ರತಿಬಿಂಬಿಸಿದೆ.
ಬೆಂಗಳೂರಿನ ಕನ್ನಡ ಮನಸ್ಸುಗಳು ಪ್ರತಿಷ್ಠಾನದ ವತಿಯಿಂದ ಪವನ್ ಅವರ ನೇತೃತ್ವದ ಸುಮಾರು 25ರಷ್ಟು ಯುವಕರ ತಂಡ ಸ್ವಯಂ ಪ್ರೇರಿತರಾಗಿ ಇಲ್ಲಿಗಾಗಮಿಸಿ ಇಲ್ಲಿನ ಶಾಲಾ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು, ಶಾಲೆಗೆ ಪ್ಯಾನ್, ಟ್ಯೂಬ್ ಲೈಟ್ ಗಳನ್ನು ಅಳವಡಿಸಿ , ಆತ್ಯಾಕರ್ಷಕ ಪೈಂಟಿಂಗ್‍ಗಳನ್ನು ರಚಿಸಿ ಅಪೂರ್ವ ಶ್ರಮದಾನಗೈದರು.
ಕನ್ನಡ ಶಾಲೆಗಳಿಗೆ ಸೇವೆಗೈಯ್ಯುವ ಬೆಂಗಳೂರಿನ ಕನ್ನಡ ಮನಸ್ಸು ಪ್ರತಿಷ್ಠಾನ ಅದೆಷ್ಟೋ ಶಾಲೆಗಳಿಗೆ ನೆರವಾದ ಸಂಘಟನೆ. ಸರ್ಕಾರಿ ಶಾಲೆ ಉಳಿಸಿ ಎಂಬ ಅಭಿಯಾನವನ್ನು ಕೈಗೊಂಡಿರುವ ಈ ಸಂಘಟನೆ ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ಬಾರಿ ಎಂಬಂತೆ ಮಂಜೇಶ್ವರದ ಕಡಂಬಾರಿನ ಸರ್ಕಾರಿ ಪ್ರೌಢಶಾಲೆಯನ್ನು ಆಯ್ಕೆಮಾಡಿದೆ. ಇಲ್ಲಿಗೆ ಆಗಮಿಸಿದ ಕನ್ನಡ ಮನಸ್ಸು ತಂಡಕ್ಕೆ ಜನಪ್ರತಿನಿಧಿಗಳು, ಶಾಲಾ ರಕ್ಷಕ-ಶಿಕ್ಷಕ ಸಂಘ, ಊರ ಗಣ್ಯರು ಭವ್ಯ ಸ್ವಾಗತವನ್ನು ನೀಡಿದರು. ಕಾಸರಗೋಡು ಜಿಲ್ಲಾ ಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾರ್ಯಕ್ರಮ ಆಯೋಜಕರಾದ ರಾಮಚಂದ್ರ ರಾವ್ ಕಡಂಬಾರು ಸ್ವಾಗತಿಸಿದರು. ಮೀಂಜ ಗ್ರಾಮ ಪಂಚಾಯತಿ ಸದಸ್ಯೆ ಸುಂದರಿ ಆರ್.ಶೆಟ್ಟಿ, ಸಂಕಬೈಲು ಸತೀಶ ಅಡಪ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮುಸ್ತಫಾ ಕಡಂಬಾರು, ಹರೀಶ್ ಶೆಟ್ಟಿ, ಯದುನಂದ ಆಚಾರ್ಯ, ಶಾಲಾ ಮುಖ್ಯೋಪಾಧ್ಯಾಯರಾದ ಶಿವಕುಮಾರ್ ಕೆ, ಉಪಸ್ಥಿತರಿದ್ದರು. ಅಧ್ಯಾಪಕ ಮೂಸಕುಂಞÂ ವಂದಿಸಿದರು.