ಕಾಸರಗೋಡು: ಅಂಗನವಾಡಿ ಕೈಹೊತ್ತಗೆಗಳ ಕನ್ನಡ ಆವೃತ್ತಿ ಇಂದು(ನ.೯) ಬಿಡುಗಡೆಗೊಳ್ಳಲಿದೆ. ೬ ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳ,ಗರ್ಭಿಣಿಯರ, ಎದೆಹಾಲುಣಿಸುವ ತಾಯಂದಿರ, ಯುವಜನತೆಯ ಆರೋಗ್ಯ ಪೋಷಣೆ ವಿಚಾರಗಳಲ್ಲಿ ಸಮಗ್ರ ಸೇವೆ ನೀಡುತ್ತಿರುವ ಅಂಗನವಾಡಿಗಳ ಕೈಹೊತ್ತಗೆಗಳನನು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರಿಗೂ ಉಪಕಾರವಾಗುವ ಉದ್ದೇಶದಿಂದ ಕನ್ನಡದಲ್ಲೂ ಆವೃತ್ತಿಯನ್ನು ರಚಿಸಲಾಗಿದೆ. ಎರಡು ಪಾಠಪುಸ್ತಕಗಳು ಮತ್ತು ಅಸೆಸ್ ಮೆಂಟ್ ಕಾರ್ಡ್ ಗಳು ಕನ್ನಡದಲ್ಲೂ ಪ್ರಕಟಗೊಂಡಿವೆ. ರಾಜ್ಯ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ತೀರ್ಮಾನ ಪ್ರಕಾರ ಈ ಭಾಷಾಂತರ ನಡೆಸಲಾಗಿದೆ.
ಕಾಞಂಗಾಡ್ ಪುರಭವನದಲ್ಲಿ ಇಂದು(ನ.೯) ಮಧ್ಯಾಹ್ನ ೩ ಗಂಟೆಗೆ ನಡೆಯುವ ಸಮಾರಂಭದಲ್ಲಿ ಸಮಾಜನೀತಿ ಸಚಿವ ಕೆ.ಕೆ.ಶೈಲಜಾ ಟೀಚರ್ ಹೊತ್ತಗೆ ಬಿಡುಗಡೆಗೊಳಿಸುವರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಅವರು ಹೊತ್ತಗೆ ಪಡೆದುಕೊಳ್ಳುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಯಾಗಿರುವರು. ಶಾಸಕರಾದ ಎಂ.ರಾಜಗೋಪಾಲನ್, ಎನ್.ಎ.ನೆಲ್ಲಿಕುನ್ನು, ಎಂ.ಸಿ.ಖಮರುದ್ದೀನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ನೀಲೇಶ್ವರಂ ನಗರಸಭೆ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್, ಕಾಸರಗೋಡು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಮೊದಲಾದವರು ಉಪಸ್ಥಿತರಿರುವರು.