ಕುಂಬಳೆ: ಒಂದು ಶಾಲೆಯ ಏಳು ಬೀಳುಗಳು ಅಲ್ಲಿರುವ ರಕ್ಷಕ ಶಿಕ್ಷಕ ಸಂಘ ಮತ್ತು ಊರವರು ಶಾಲೆಯ ಮೇಲಿರಿಸುವ ಪ್ರೀತಿಯನ್ನು ಆಶ್ರಯಿಸಿರುತ್ತದೆ ಎಂದು ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಹೇಳಿದರು.
ಪೇರಾಲು ಸರ್ಕಾರಿ ಕಿರಿಯ ಬುನಾದಿ ಶಾಲೆಗೆ ಮಂಜೇಶ್ವರ ಶಾಸಕರಾಗಿದ್ದ ಪಿ.ಬಿ.ಅಬ್ದುಲ್ ರಝಾಕ್ ಅವರ ಶಿಫಾರಸ್ಸಿನ ಮೇರೆಗೆ ಕೇರಳ ಸರ್ಕಾರವು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿಯಿಂದ ಮಂಜೂರು ಮಾಡಿರುವ ಒಂದೂ ಕೋಟಿ ರೂಪಾಯಿಯ ನಿರ್ಮಾಣ ಕಾಮಕಾರಿಗೆ ಇತ್ತೀಚೆಗೆ ಶಿಲಾನ್ಯಾಸಗೈದು ಅವರು ಮಾತನಾಡಿದರು.
ಕೇರಳ ವಿಧಾನ ಸಭೆಯ ನೂತನ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿ, ಸಭೆಯಲ್ಲಿ ಭಾಗವಹಿಸಿದ ಅನಂತರ ಪಾಲ್ಗೊಳ್ಳುತ್ತಿರುವ ಮೊತ್ತಮೊದಲ ಸಮಾರಂಭವು ಊರವರ ಪೂರ್ಣ ಬೆಂಬಲದೊಂದಿಗೆ ರಾಜ್ಯಕ್ಕೆ ಮಾದರಿಯಾದ ಕೆಲಸಗಳನ್ನು ಮಾಡುತ್ತಿರುವ ರಕ್ಷಕ ಶಿಕ್ಷಕ ಸಂಘವು ಏರ್ಪಡಿಸಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವುದು ಅತ್ಯಂತ ಹೆಮ್ಮೆಯನ್ನೂ ಸಂತೋಷವನ್ನೂ ಉಂಟುಮಾಡಿದೆ ಎಂದರು. ಶಾಲೆಯ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿರುವ ಈ ನಾಡಿನ ಜನತೆಯನ್ನು ಎಷ್ಟು ಹೊಗಳಿದರೂ ಸಾಲದು. ಈ ಶಾಲೆ ಭಡ್ತಿ ಹೊಂದುವುದು ಅತ್ಯಂತ ಅಗತ್ಯದ್ದೆಂದು ಮನವರಿಕೆಯಾಗಿದೆ. ಅದಕ್ಕಾಗಿ ನಿರಂತರ ಪ್ರಯತ್ನ ನನ್ನಿಂದಲೂ ನಡೆಯಲಿದೆ ಎಂದು ಭರವಸೆಯನ್ನಿತ್ತರು.
ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಅಧ್ಯಕ್ಷತೆ ವಹಿಸಿದ ಸಮಾರಂಭಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಾನು ಪ್ರತಿನಿಧಿಸುವ ಪ್ರದೇಶದಲ್ಲಿ ಇಂತಹ ಶೈಕ್ಷಣಿಕ ಸಾಧನೆ ತನಗೂ ಅಭಿಮಾನವನ್ನು ತಂದಿದೆ ಎಂದರು. ಕುಂಬಳೆ ಗ್ರಾಮ ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ.ಆರಿಫ್, ವಿವಿಧ ರಾಜಕೀಯ ಪಕ್ಷಗಳ ನೇತಾರರು, ಪರಿಸರದ ಸಂಘಗಳ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವಾರ್ಡನ್ನು ಪ್ರತಿನಿಧಿಸುವ ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ವಿ.ಪಿ.ಅಬ್ದುಲ್ ಖಾದರ್ ಹಾಜಿ ಸ್ವಾಗತಿಸಿ, ಶಿಕ್ಷಕ ವಿನುಕುಮಾರ್ ವಂದಿಸಿದರು. ಮುಖ್ಯ ಶಿಕ್ಷಕ ಗುರುಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಒಂದು ಕೋಟಿ ರೂಪಾಯಿ ಯೋಜನೆಯ ಅಡಿಯಲ್ಲಿ ಐದು ತರಗತಿ ಕೋಣೆಗಳು, ಐನ್ನೂರು ಮೀಟರ್ ಉದ್ದದ ಆವರಣ ಗೋಡೆ, ಆರುನೂರು ಚದರ ಅಡಿಯ ಪಾಕ ಶಾಲೆ ಇನ್ನೂರ ಐವತ್ತೈದು ಚದರ ಮೀಟರ್ ವಿಸ್ತೀರ್ಣದ ಅಸೆಂಬ್ಲಿ ಹಾಲ್ ನಿರ್ಮಾಣವಾಗಲಿದೆ.