ಮಂಜೇಶ್ವರ: ಪ್ಲಾಸ್ಟಿಕ್ ಮಾಲಿನ್ಯಯುಕ್ತವಾದ ಮಂಜೇಶ್ವರ ಕಡಲ ತೀರವನ್ನು ಶುಚೀಕರಿಸಲು ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಡಲ ತೀರಕ್ಕಿಳಿದರು. ಕೇಂದ್ರ ಅರಣ್ಯ, ಪರಿಸರ ಹಾಗೂ ಪ್ರಾಕೃತ್ತಿಕ ಶುಚಿತ್ವ ಇಲಾಖೆ , ಜಿಲ್ಲಾ ಇಕೋ ಕ್ಲಬ್, ರಾಷ್ಟ್ರೀಯ ಗ್ರೀನ್ ಕೋರ್ಪ್, ಕಾಸರಗೋಡು ಜಿಲ್ಲಾಡಳಿತದ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಮಂಜೇಶ್ವರ ಬೀಚ್ ಕ್ಲೀನ್ ಅಭಿಯಾನಕ್ಕೆ ಕಾಸರಗೋಡು ಜಿಲ್ಲಾ ಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು, ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಬಳಕೆಗೆ ನಿಯಂತ್ರಣ ಹೇರದಿದ್ದರೆ ಪ್ರಾಕೃತಿಕ ಅಸಮತೋಲನದಿಂದ ಭವಿಷ್ಯದಲ್ಲಿ ಅಪಾಯಕಾರಿ ಸ್ಥಿತಿ ಉಂಟಾಗಲಿದೆಯೆಂದು ಹೇಳಿದರು.
ಪೀಪಲ್ಸ್ ಫಾರಂ ಕಾರ್ಯದರ್ಶಿ ಎಂ.ಪದ್ಮಾಕ್ಷನ್, ಮಂಜೇಶ್ವರ ಪ್ರೆಸ್ ಕ್ಲಬ್ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ, ಕೆ.ವಿ.ಕುಮಾರನ್, ಎಂ.ರಾಧಾಕೃಷ್ಣನ್, ಉಷಾ, ಅಜೀಶ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಕ ಪೆÇ್ರ.ಗೋಪಿನಾಥನ್ ಸ್ವಾಗತಿಸಿ, ವಂದಿಸಿದರು.
ಮಂಜೇಶ್ವರ ಗೋವಿಂದ ಪೈ ಕಾಲೇಜು, ಮೀಯಪದವು ಶಾಲೆ, ಪಟ್ಲ ಶಾಲೆ ಹಾಗೂ ಸ್ಥಳೀಯ ಶಾಲಾ ಮಕ್ಕಳು ಎರಡು ದಿನಗಳ ಕಾಲ ಜರಗಿದ ಶುಚಿತ್ವ ಅಭಿಯಾನದಲ್ಲಿ ಪಾಲ್ಗೊಂಡರು. ಮಂಜೇಶ್ವರ ಬೀಚ್ ಪರಿಸರದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ತೆರವುಗೊಳಿಸಿದರು.