ತಿರುವನಂತಪುರ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನಕ್ಸಲರಿಂದ ಕೊಲೆ ಬೆದರಿಕೆ ಸಂದೇಶ ತಲುಪಿದೆ. ವಡಗರ ಪೊಲೀಸ್ ಠಾಣೆಗೆ ಪತ್ರದ ಮೂಲಕ ಬೆದರಿಕೆ ಸಂದೇಶ ರವಾನಿಸಲಾಗಿದೆ. 'ಏಳು ಮಂದಿ ಸಂಗಾತಿಗಳನ್ನು ಕೊಲೆ ನಡೆಸಿದ ಮುಖ್ಯಮಂತ್ರಿಗೆ ಅಗತ್ಯವಿರುವ ಶಿಕ್ಷೆ ನಾವು ನೀಡಲು ತಯಾರಾಗಿದ್ದೇವೆ'ಎಂಬುದಾಗಿ ಪತ್ರದಲ್ಲಿ ಒಕ್ಕಣೆ ಬರೆಯಲಾಗಿದೆ.
ಅರ್ಬನ್ ಆಕ್ಷನ್ ಟೀಮ್‍ಗಾಗಿ ಬದರ್ ಮೂಸಾ ಪಶ್ಚಿಮ ಘಟ್ಟ ಕಬಿನಿ ದಳ ಆಕ್ಷನ್ ಸಮಿತಿ ಉಪಾಧ್ಯಕ್ಷ ಎಂಬ ಹೆಸರಲ್ಲಿ ಪತ್ರ ರವಾನೆಯಾಗಿದ್ದು, ಇದರ ಜತೆಗೆ ಕಿರು ಹೊತ್ತಗೆಗಳನ್ನೂ ಕಳುಹಿಸಿಕೊಡಲಾಗಿದೆ. ಪತ್ರವನ್ನು ಚೆರ್ವತ್ತೂರಿನಿಂದ ರವಾನಿಸಲಾಗಿದೆ.
ಇದರ ಜೊತೆಗೆ ಪೆರಾಂಬ್ರ ಠಾಣೆ ಎಸ್.ಐ ಹರೀಶ್ ನಡವಳಿಕೆ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 'ಜನಸಾಮಾನ್ಯರು ನೀಡುವ ತೆರಿಗೆ ಹಣದಲ್ಲಿ ವೇತನ ಪಡೆಯುವ, ಎಸ್.ಐ ಜನಸಾಮಾನ್ಯರನ್ನು ಬೀದಿನಾಯಿಗಳಂತೆ ಬಡಿದು ಹಲ್ಲೆ ನಡೆಸಲು ಯಾವ ಕಾನೂನಿನಲ್ಲೂ ನಮೂದಿಸಿಲ್ಲ. ಎಸ್.ಐ ಹರೀಶ್‍ನನ್ನು ಅರ್ಬನ್ ಆಕ್ಷನ್ ಟೀಂ ನೋಡಿಕೊಳ್ಳಲಿದೆ'ಎಂದೂ ತಿಳಿಸಲಾಗಿದೆ.
ಪತ್ರ ತಲುಪಿರುವ ಹಿನ್ನೆಲೆಯಲ್ಲಿ ಡಿವೈಎಸ್‍ಪಿ ನೇತೃತ್ವದಲ್ಲಿ ಪತ್ರದ ಮೂಲ ಪತ್ತೆಹಚ್ಚಲು ಕ್ರಮ ಆರಂಭಿಸಲಾಗಿದೆ.