ಕಾಸರಗೋಡು: ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಸಿದ್ಧತೆಗಳ ಅವಲೋಕನ ಸಭೆ ಕಾಂಞAಗಾಡ್ ಸೂರ್ಯ ಸಭಾಂಗಣದಲ್ಲಿ ಶನಿವಾರ ಜರಗಿತು. ಶಿಕ್ಷಣ ಸಚಿವ ಪ್ರೊ.ಸಿ.ರವೀಂದ್ರನಾಥ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಏಕಕಾಲಕ್ಕೆ ಸರಳವಾಗಿಯೂ, ವೈಭವಯುತವಾಗಿಯೂ ನಡೆಯಬೇಕಿರುವ ಕಲೋತ್ಸವ ಪೂರ್ಣ ರೂಪದಲ್ಲಿ ಹಸುರು ಸಂಹಿತೆಗೆ ಬದ್ದವಾಗಿ ನಡೆಯಬೇಕು ಎಂದು ಆಗ್ರಹಿಸಿದರು. ವೇದಿಕೆಗಳು ಪರಸ್ಪರ ಹೈಟೆಕ್ ಸೌಲಭ್ಯದೊಂದಗಿನ ಸಂಪರ್ಕ ಹೊಂದುವ ಸೌಲಭ್ಯ ಏರ್ಪಡಿಸಲಾಗುವುದು. ಯಾವ ಸಮಸ್ಯೆಗಳು ತಲೆದೋರಿದರೂ ತತ್‌ಕ್ಷಣ ಸಾರ್ವಜನಿಕ ಶಿಕ್ಷಣ ನಿರ್ದೇಶಕರ ಗಮನಕ್ಕೆ ತರಬೇಕು. ಕಲೋತ್ಸವವು ದುಂದುವೆಚ್ಚ ಯಾ ಭ್ರಷ್ಟಾಚಾರದ ವೇದಿಕೆಯಾಗಕೂಡದು ಎಂದವರು ತಿಳಿಸಿದರು.
ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಸಾರ್ವಜನಿಕ ಶಿಕ್ಷಣ ನಿರ್ದೇಶಕ ಜೀವನ್ ಬಾಬು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕಾಂಞAಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ನೀಲೇಶ್ವರ ನಗರಸಭೆ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್, ಸಾರ್ವಜನಿಕ ಶಿಕ್ಷಣ ಜತೆ ನಿರ್ದೇಶಕರು, ಎಸ್.ಎಸ್.ಎ., ಕೈಟ್, ಡಯಟ್, ಪೊಲೀಸ್, ತ್ರಿಸ್ತರ ಪಂಚಾಯತ್, ವಿವಿಧ ಇಲಾಖೆಗಳ, ವಿವಿಧ ಸಂಘಟಕ ಸಮಿತಿಗಳ ಸಂಚಾಲಕರು, ಪತ್ರಕರ್ತರು ಮೊದಲಾದವರು ಉಪಸ್ಥಿತರಿದ್ದರು.