ಮಂಜೇಶ್ವರ: ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಜನರು ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಮರೆತು ಫಾಸ್ಟ್ಫುಡ್ ಸಂಸ್ಕೃತಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಸಾಕಷ್ಟು ಸಾಂಪ್ರದಾಯಿಕ ಆಹಾರ ಪದಾರ್ಥಗಳು ನಮ್ಮಲ್ಲಿವೆ. ಕಲಬೆರಕೆಯುಕ್ತ ಆಹಾರ ಪದಾರ್ಥಗಳನ್ನು ತ್ಯಜಿಸಿ ಸಾಂಪ್ರದಾಯಿಕ ಹಾಗೂ ಮನೆಯಲ್ಲೇ ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ದಿನನಿತ್ಯದ ಬದುಕಿನಲ್ಲಿ ಬಳಸಿಕೊಳ್ಳಬೇಕು ಎಂದು ಪೈವಳಿಕೆ ಆಯರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗಣೇಶ್ ಕುಮಾರ್ ಹೇಳಿದರು.
ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ನಡೆದ ಆಹಾರ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಾಲಾ ಸಂಚಾಲಕ ಡಾ. ಜಯಪ್ರಕಾಶ ನಾರಾಯಣ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಾಂಶುಪಾಲ ರಮೇಶ್. ಕೆ. ಎನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಹೊನ್ನೆಕಟ್ಟೆ, ಸ್ಕೂಲ್ ಪ್ರೊಟೆಕ್ಷನ್ ಗುಂಪಿನ ಸಂಚಾಲಕ ಪುಷ್ಪರಾಜ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತಯಾರಿಸಿದ ನೂರಕ್ಕಿಂತಲೂ ಹೆಚ್ಚು ವಿವಿಧ ಆಹಾರ ಪದಾರ್ಥಗಳನ್ನು ಪ್ರಸ್ತುತ ಮೇಳದಲ್ಲಿ ಪ್ರದರ್ಶಿಸಲಾಯಿತು. ಅಧ್ಯಾಪಕ ರವಿಲೋಚನ. ಸಿ. ಎಚ್ ಸ್ವಾಗತಿಸಿ, ಗೀತಾ. ಎನ್ ವಂದಿಸಿದರು. ಹರೀಶ. ಜಿ ಕಾರ್ಯಕ್ರಮ ನಿರೂಪಿಸಿದರು.