ಮಂಜೇಶ್ವರ: ಸಾಹಿತ್ಯ ಬರಹಗಳು ಸಾಕಷ್ಟು ಪ್ರಕಟಗೊಳ್ಳುತ್ತಿದ್ದರೂ ಅದರೊಳಗಿನ ಮಹತ್ವದ ಬೆಳಕನ್ನು ಕಂಡುಕೊಳ್ಳಲು ಓದುಗರ ಸಂಖ್ಯೆ ಕಳವಳಕಾರಿಯಾಗಿ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಗ್ರಂಥಾಲಯಗಳು ಪುಸ್ತಕ ಸಂಗ್ರಹ ಕೇಂದ್ರಗಳಾಗಿ ಬದಲಾಗಬಾರದು. ಸಾಮುದಾಯಿಕ ಸಮಷ್ಠಿ ಪ್ರಜ್ಞೆಯ ಪ್ರತೀಕವಾಗಿ ಗ್ರಂಥಾಲಯಗಳು ಬೆಳೆದುಬರಬೇಕು ಎಂದು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಗಿಳಿವಿಂಡಿನ ಕಾರ್ಯದರ್ಶಿ, ಮಂಜೇಶ್ವರ ಬ್ಲಾ.ಪಂ.ಸದಸ್ಯ ಕೆ.ಆರ್.ಜಯಾನಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಆಶ್ರಯದಲ್ಲಿ ಮಂಜೇಶ್ವರ ನೇತೃತ್ವ ಸಮಿತಿ ಆಶ್ರಯದಲ್ಲಿ ಶನಿವಾರ ಅಪರಾಹ್ನ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಲ್ಲಿ ಹಮ್ಮಿಕೊಳ್ಳಲಾಗಿದ್ದ ಮನೆಯಂಗಳದಿ ಸಾಹಿತ್ಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ತಲೆಮಾರಿಗೆ ಓದುವಿಕೆಯ ಬಗ್ಗೆ ಆಸಕ್ತಿ ಬರುವ ನಿಟ್ಟಿನಲ್ಲಿ ಹೊಸ ಚಿಂತನೆಗಳನ್ನು ಒಳಗೊಂಡ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಬಹುದಾಗಿದ್ದು, ಹಿಂದೆ ಶಾಲೆ, ಸಾರ್ವಜನಿಕ ಕೇಂದ್ರಗಳಲ್ಲಿ ದಿನ ಪತ್ರಿಕೆಗಳ ನಿತ್ಯ ಓದುವ ಪರಿಪಾಠ ಇತ್ತು. ಮರೆಯಾಗಿರುವ ಅಂತಹ ಕ್ರಮವನ್ನು ಮರಳಿ ಜೋಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕು ಲೈಬ್ರರಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ.ಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರು ವಿವಿಯ ಸಂಶೋಧನಾ ವಿದ್ಯಾರ್ಥಿ ಕೆ.ಶಿವರಾಜ್ ಅವರು ಜಾನಪದ ಮಹಾಕಾವ್ಯ-ಆಧುನಿಕ ದೃಷ್ಟಿಕೋನ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ, ಜನಪದ ಮತ್ತು ಶಿಷ್ಟ ಜಾನಪದೀಯತೆಯ ಮಧ್ಯೆ ಬಹಳಷ್ಟು ಭಿನ್ನತೆಗಳಿವೆ. ಜನಸಾಮಾನ್ಯರ ಎಡೆಯಿಂದ ಅರಳಿದ ವೀರರ ಸಾಂಸ್ಕøತಿಕತೆಗಳ ಜನಪದೀಯ ಸಂಸ್ಕøತಿಯನ್ನು ಮರೆಮಾಚಿ ಶಿಷ್ಟತೆಯನ್ನು ಹೇರುವ ಯತ್ನ ಇಂದು ನಡೆಯುತ್ತಿದ್ದು ಇದು ಆತಂಕಕಾರಿಯಾದುದು ಎಂದು ತಿಳಿಸಿದರು. ಮಲೆಮಹದೇಶ್ವರನಂತಹ ಸಾಂಸ್ಕøತಿಕತೆಯನ್ನು ಶಿವನ ಅಪರವತಾರ ಎಂದು ಬಿಂಬಿಸಿ ಮೂಡಿಸಿರುವ ಶಿಷ್ಟತೆ ಒಟ್ಟು ಜನಪದೀಯತೆಯನ್ನು ಮೂಲೆಗುಂಪಾಗಿಸಿದೆ. ಜನಪದೀಯತೆಗೆ ಶಿಷ್ಟತೆಯ ಪರಿಧಿಯಲ್ಲಿ ತಂದು ನಿಲ್ಲಿಸುವ ಹೇಯತೆಯಿಂದ ತಳಮಟ್ಟದ ಜನವರ್ಗಕ್ಕೆ ಇಂದು ಮತ್ತೆ ಅವನತಿಯ ದಾರಿಗೆಳಸುವ ಯತ್ನ ಮುಂದುವರಿದಿದೆ ಎಂದರು. ಈ ಹಿನ್ನೆಲೆಯಲ್ಲಿ ಜಾನಪದೀಯ ಮಹಾಕಾವ್ಯಗಳ ಆಧುನಿಕ ಓದು ಕೂದಲ ಮೇಲಿನ ನಡಿಗೆಯಂತೆ ಅತಿ ಸೂಕ್ಮವಾದುದು ಎoದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಸಂತೋಷ್ ಕುಮಾರ್, ಶಿಕ್ಷಕ, ಸಾಹಿತಿ ಗಣೇಶ್ ಪ್ರಸಾದ್ ನಾಯಕ್ ಮಂಜೇಶ್ವರ, ಪತ್ರಕರ್ತ ಸನಿಲ್ ಕುಮಾರ್ ಉಪಸ್ಥಿತರಿದ್ದು ಮಾತನಾಡಿದರು.
ಸಮಾರಂಭದಲ್ಲಿ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಹಾಗೂ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್ ಅವರನ್ನು ಹಿರಿಯ ಸಾಹಿತಿ, ವೈದ್ಯ ಡಾ.ರಮಾನಂದ ಬನಾರಿ ಸನ್ಮಾನಿಸಿ ಗೌರವಿಸಿದರು. ಈ ಸಮದರ್ಭ ನಡೆದ ಸಂವಾದದಲ್ಲಿ ಡಿ.ಕಮಲಾಕ್ಷ, ಶ್ರೀಕುಮಾರಿ ಟೀಚರ್, ಮೋಹನ ಯು.ಮಂಜೇಶ್ವರ ಮೊದಲಾದವರು ಭಾಗವಹಿಸಿದರು. ಜಯಂತ ಎಂ. ಸ್ವಾಗತಿಸಿ, ಡಿ.ಕಮಲಾಕ್ಷ ವಂದಿಸಿದರು. ಸಭಾ ಕಾರ್ಯಕ್ರಮದ ಮೊದಲು ಗುಜ್ಜಣಿಗೆ ಬಳಗ ಮಂಜೇಶ್ವರ ತಂಡದಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು.