ಕಾಸರಗೋಡು: ಕಳೆದ ಎರಡು ದಿವಸಗಳಿಂದ ಕಾಸರಗೋಡು-ತಲಪ್ಪಾಡಿ ಮಧ್ಯೆ ನಡೆದ ಖಾಸಗಿ ಬಸ್ ಮುಷ್ಕರ ವಾಪಾಸುಪಡೆಯಲಾಗಿದ್ದು, ನವೆಂಬರ್ 27ರಿಂದ ಎಂದಿನಂತೆ ಬಸ್ ಸಂಚಾರ ಆರಂಭಿಸುವುದಾಗಿ ಬಸ್ ಮಾಲಿಕರ ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.
ಮಂಜೇಶ್ವರದ ಸರ್ಕಾರಿ ಅತಿಥಿಗೃಹದಲ್ಲಿ ಮಂಗಳವಾರ ಶಾಸಕ ಎಂ.ಸಿ ಕಮರುದ್ದೀನ್ ಅವರು ಗುತ್ತಿಗೆದಾರ ಶೆರೀಫ್ ಬೇರ್ಕ, ಬಸ್ ಮಾಲಿಕರ ಸಂಘಟನೆ ಪದಾಧಿಕಾರಿಗಳಾದ ಕೆ. ಗಿರೀಶ್, ಸುಬ್ಬಣ್ಣ ಶೆಟ್ಟಿ, ಎನ್. ಎಂ. ಹಸೈನಾರ್, ಶಂಕರನಾಯ್ಕ್, ಮಹಮ್ಮದ್‍ಕುಞÂ ಪಿ.ಎ ಅವರೊಂದಿಗೆ ಚರ್ಚೆ ನಡೆಸಿ, ದುರಸ್ತಿಕೆಲಸ ತಕ್ಷಣ ಆರಂಭಿಸುವ ಭರವಸೆಯೊಂದಿಗೆ ಬಸ್ ಓಡಾಟ ಪುನ: ಆರಂಭಿಸಲು ತೀರ್ಮಾನಿಸಲಾಗಿದೆ. ಅಡ್ಕತ್ತಬೈಲ್‍ನಿಂದ ಪೆರುವಾಡ್ ವರೆಗೆ ದುರಸ್ತಿಕೆಲಸ ಆರಂಭಿಸಲಾಗಿದ್ದು, ತಲಪ್ಪಾಡಿಯಿಂದ ಕಾಸರಗೋಡು ವರೆಗೆ ಡಿಸೆಂಬರ್ 15ರ ವೇಳೆಗೆ ದುರಸ್ತಿಕಾರ್ಯ ಪೂರ್ತಿಗೊಳಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದಾರೆ.
ಆದರೆ, ಕಾಸರಗೋಡು-ಬದಿಯಡ್ಕ-ಪೆರ್ಲ ರೂಟಲ್ಲಿ ಬಸ್ ಸಂಚಾರ ಪುನ:ಆರಂಭಿಸುವ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಇದರಿಂದ ಈ ರೂಟಲ್ಲಿ ಬಸ್ ಮುಷ್ಕರ ಮುಂದುವರಿಯುವ ಸಾಧ್ಯತೆಯಿದೆ.