ಕಾಸರಗೋಡು: ಸೈಕಲ್ ತುಳಿಯ ಬಲ್ಲಿರಾ..? ಇಕೋ 1111 ರೂ. ಪಡೆಯಿರಿ...ಇದು ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನರನ್ನು ಸೆಳೆಯುವ ಯತ್ನಗಳಲ್ಲಿ ಒಂದು.
ರಾಜ್ಯ ಮಟ್ಟದ ಶಾಲಾ ಕಲೋತ್ಸವ ಅಂಗವಾಗಿ ಕಾಂಞಂಗಾಡ್ ಅಲಾಮಿಪಳ್ಳಿ ಬಸ್ ನಿಲ್ದಾಣ ಆವರಣದಲ್ಲಿ ನಡೆಯುತ್ತಿರುವ ಪ್ರದರ್ಶನ ಮೇಳದಲ್ಲಿ ಈ ಕುತೂಹಲಕಾರಿ ಜಾಗೃತಿ ಕಾರ್ಯಕ್ರಮ ನಡೆಯಿತು.
ಕೇರಳ ಕೇಂದ್ರ ವಿವಿಯ ವಿದ್ಯಾರ್ಥಿಗಳು ತ್ಯಾಜ್ಯ ನಿಯಂತ್ರಣ, ಪುನರ್ ಬಳಕೆ ಇತ್ಯಾದಿ ಸಂದೆಶಗಳನ್ನು ಸಾರಲು ಹೀಗೊಂದು ವಿಭಿನ್ನ ಶೈಲಿಯಿಂದ ರಂಗಕ್ಕಿಳಿದಿದ್ದಾರೆ. ವಿವಿಯ ವಿದ್ಯಾರ್ಥಿ ಒಕ್ಕೂಟ ಫಯರ್ ಫ್ಲೈ ವಿಶೇಷ ರೀತಿ ಡಿಸೈನ್ ಮಾಡಿರುವ ಸೈಕಲ್‍ನ್ನು ನಿಮಿಷಕ್ಕೆ ಹತ್ತು ಮೀಟರ್‍ನಷ್ಟು ತುಳಿದುಕೊಂಡು ಸಂಚಾರ ನಡೆಸಿದರೆ 1111 ರೂ. ಬಹುಮಾನ ರೂಪದಲ್ಲಿ ನೀಡಲಾಗುತ್ತಿದೆ. ಸೈಕಲ್ ತುಳಿಯುವುದೇನು ಮಹಾ..ಎಂದು ಮೂಗು ಮುರಿಯಬೇಡಿ. ಇದು ಸುಲಭದ ಮಾತಲ್ಲ..! ವಿಶಿಷ್ಟ ರೀತಿ ರಚನೆಗೊಂಡ ಈ ಸೈಕಲ್ ಬಲಕ್ಕೆ ಹ್ಯಾಂಡಲ್ ತಿರುಗಿಸಿದರೆ ಎಡಕ್ಕೆ ವಾಲುತ್ತದೆ. ಎಡಕ್ಕೆ ತಿರುಗಿಸಿದರೆ ಬಲಕ್ಕೆ ಬರುತ್ತದೆ. ಈ ವರೆಗೆ 413 ಮಂದಿ ಈ ಸೈಕಲ್ ಏರಿ ಸವಾರಿಗೆ ಹೊರಟವರು ಸೋತುಹೋಗಿದ್ದಾರೆ. ನೀವೂ ಒಮ್ಮೆ ಟ್ರೈ ಮಾಡಿ...
ಇದರ ಜೊತೆಗೆ ಗ್ಲಾಸ್ ಪಿರಮಿಡ್, ನಟ್ಸ್ ಟೇಕಿಂಗ್ ಇತ್ಯಾದಿ ಕಾರ್ಯಕ್ರಮಗಳೂ ಗಮನ ಸೆಳೆಯುತ್ತವೆ. 30 ಸೆಕೆಂಡ್‍ಗಳಲ್ಲಿ 28 ಕ್ಲಾಸ್‍ಗಳಲ್ಲಿ ಗ್ಲಾಸ್ ಪಿರಮಿಡ್ ರಚಿಸಬೇಕು. 40 ನಿಮಿಷಗಳ ಅವ„ಯಲ್ಲಿ ಕೆಲವರು ಪಿರಮಿಡ್ ರಚಿಸಿದ್ದರೂ, ನಿಗದಿತ 30 ನಿಮಿಷಗಳಲ್ಲಿ ರಚಿಸುವಲ್ಲಿ ಈ ವರೆಗೆ ಯಾರೂ ಯಶಸ್ವಿಯಾಗಿಲ್ಲ.
ಇಲ್ಲಿನ ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತರಿಂದ ಹೆಸರು ನೋಂದಣಿ ವೇಳೆ 20 ರೂ. ಪಡೆಯಲಾಗುತ್ತದೆ. ಈ ಹಣ ಫಯರ್ ಫ್ಲೈ ಸಂಘಟನೆ ನಡೆಸುವ ಪ್ರಕೃತಿ ಸಂರಕ್ಷಣೆ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಮನೆಗಳಲ್ಲಿ ಬಳಕೆಯಿಲ್ಲದೆ ಮೂಲೆಗಿರಿಸಲಾದ ಸೈಕಲ್ ಇದ್ದರೆ ಅದನ್ನು ಪಡೆದು ಮರುಜೀವ ನೀಡಿ ಬಡ ವಿದ್ಯಾರ್ಥಿಗಳಿಗೆ ನೀಡುವ ಯೋಜನೆ (ರೀ ಸೈಕ್ಲಿಂಗ್)ಯೂ ಸಂಘಟನೆಯಲ್ಲಿದೆ. ಇತರ ಚಟುವಟಿಕೆಗಳ ಬಗ್ಗೆ ಸಂಘಟನೆಯ ಪ್ರತಿನಿಧಿಗಳು ಸ್ಟಾಲ್‍ನಲ್ಲಿ ಮಾಹಿತಿ ನೀಡಿದರು.