ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಕಳೆದ ಹಲವು ವರ್ಷಗಳಿಂದ ಪಾದಯಾತ್ರೆಯ ಮೂಲಕ ಕೈಗೊಳ್ಳುತ್ತಿರುವ ಮೋಹನ ಕಲ್ಲೂರಾಯ ಅವರು ಈ ಬಾರಿಯೂ ತಮ್ಮ ವ್ರತ ತಪ್ಪಿಸಿಲ್ಲ. ಬೆಂಗಳೂರಿನಿಂದ ಕಾಲ್ನಡಿಗೆ ಮೂಲಕ ಆಗಮಿಸಿದ ಇವರು, ಇತಿಹಾಸಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಒಂದು ದಿನದ ವಿಶ್ರಾಂತಿಯ ಬಳಿಕ, ಅಯ್ಯಪ್ಪ ಸನ್ನಿಧಿಗೆ ಪಾದಯಾತ್ರೆ ಬೆಳೆಸಿದ್ದಾರೆ.
ಬೆಂಗಳೂರು ಬಿಡದಿ ನಿವಾಸಿ ಮೋಹನ ಕಲ್ಲೂರಾಯ ಅವರು 67ರ ಹರೆಯದ ಚಿರ ಯವ್ವನಿಗ! 17ವರ್ಷಗಳ ಪಾದ ಯಾತ್ರೆ ಪೂರೈಸಿರುವ ಕಲ್ಲೂರಾಯ ಅವರು, 18ನೇ ವರ್ಷದ ಯಾತ್ರೆಯನ್ನು ಬೆಂಗಳೂರಿನಿಂದ ಆರಂಭಿಸಿ, ಮೈಸೂರು ಹಾದಿಯಾಗಿ ಕಾಸರಗೋಡಿನ ಮಧೂರಿಗೆ ತಲುಪಿದ್ದಾರೆ.
1999ರಲ್ಲಿ ಮೊದಲಬಾರಿಗೆ ಪಾದ ಯಾತ್ರೆ ಮೂಲಕ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದು, ಅಂದಿನಿಂದ ಸತತವಾಗಿ ಬೆಂಗಳೂರಿನಿಂದ ಮಧೂರಿಗೆ ಆಗಮಿಸಿ, ಗಣಪತಿ ದರ್ಶನದೊಂದಿಗೆ ಯಾತ್ರೆ ಮುಂದುವರಿಸುತ್ತಿದ್ದೇನೆ. ಇದು ತನ್ನ ಹದಿನೆಂಟನೇ ವರ್ಷದ ಪಾದ ಯಾತ್ರೆಯಾಗಿದ್ದು, ವಯೋಸಹಜ ಸಮಸ್ಯೆಯಿಂದ ಮುಂದಿನ ವರ್ಷದಿಂದ ವಾಹನದ ಮೂಲಕ ಯಾತ್ರೆ ಮುಂದುವರಿಸಲು ತೀರ್ಮಾನಿಸಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬರಿಗಾಲಲ್ಲಿ ನೂರಾರು ಕಿ. ಮೀ ಪಾದಯಾತ್ರೆ ನಡೆಸಿ, ಅಯ್ಯದರ್ಶನ ಮಾಡುತ್ತಿರುವ ಮೋಹನ ಕಲ್ಲೂರಾಯ ಅವರು, ಸ್ವತ: ಇರುಮುಡಿ ಕಟ್ಟು ಕಟ್ಟಿ ಒಂಟಿಯಾಗಿ ತೆರಳುತ್ತಾರೆ. ಪ್ರತಿ ದಿನ 40ರಿಂದ 46ಕಿ.ಮೀ ದೂರ ಪಾದಯಾತ್ರೆಯ ಮೂಲಕ ಕ್ರಮಿಸುವ ಇವರು, ಸಂಚಾರದ ಸಂದರ್ಭ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ದೇವಾಲಯಗಳಲ್ಲಿ, ಸ್ನೇಹಿತ ಪುರೋಹಿತವರ್ಗದವರ ಮನೆಯಲ್ಲಿ ಭಿಕ್ಷೆ ಸ್ವೀಕರಿಸುವ ಇವರು ಬೆಳಗ್ಗೆ 3ಕ್ಕೆ ಪಾದಯಾತ್ರೆ ಆರಂಭಿಸಿ, 9ರ ವರೆಗೂ ನಡೆಯುತ್ತಾರೆ. ನಂತರ ವಿಶ್ರಾಂತಿ ಪಡೆದು, ಮಧ್ಯಾಹ್ನ 3ಕ್ಕೆ ಪಾದಯಾತ್ರೆ ಮುಂದುವರಿಸಿ, ರಾತ್ರಿ 7ಕ್ಕೆ ವಿಶ್ರಾಂತಿ ಕೈಗೊಳ್ಳುತ್ತಾರೆ. ಕಾಲ್ನಡಿಗೆ ಮೂಲಕ ತೆರಳಿ, ಶ್ರೀ ಅಯ್ಯಪ್ಪ ದರ್ಶನ ಪಡೆದಾಗ ಸಿಗುವ ಅನುಭವವೇ ಬೇರೆ. ಶ್ರೀದೇವರ ದಯೆಯಿಂದ ಯಾತ್ರೆ ಯಾವುದೇ ತೊಡಕಿಲ್ಲದೆ ಸಾಗುತ್ತದೆ ಎಂಬುದಾಗಿ ತಮ್ಮ ಯಾತ್ರೆ ಅನುಭವ ಹಂಚಿಕೊಳ್ಳುತ್ತಾರೆ. ಡಿಸೆಂಬರ್ 22ಕ್ಕೆ ಸನ್ನಿದಾನ ತಲುಪಿ, ಶ್ರೀದೇವರ ದರ್ಶನ ನಡೆಸಿದ ಬಳಿಕ 24ರಂದು ವಾಪಸಾಗುವುದಾಗಿ ತಿಳಿಸುತ್ತಾರೆ.