ನವದೆಹಲಿ: ಒಂದು ತಿಂಗಳಿನಲ್ಲಿ ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಪ್ರವೇಶಿಸುವ ಈ ವೇಳೆ ಸೂರ್ಯ ತನ್ನ ಪ್ರಖರತೆಯನ್ನು ಕಳೆದುಕೊಳ್ಳುತ್ತದೆ. ಕೆಲವೇ ಕ್ಷಣಗಳು ಸಂಭವಿಸುವ ಈ ವಿದ್ಯಮಾನಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ.
ಪ್ರಖರಿಸುವ ಗುಂಡನೆಯ ಸೂರ್ಯ, ಗ್ರಹಣ ಆವರಿಸಿದ ಸಂದರ್ಭದಲ್ಲಿ ಚಿನ್ನದ ಹೊಳಪಿನ ಉಂಗುರದಂತೆ ಗೋಚರಿಸುತ್ತಾನೆ. ಡಿ. 26ರಂದು 2019ರ ಕೊನೆಯ ಸೂರ್ಯಗ್ರಹಣ ಉಂಟಾಗಲಿದ್ದು, ಇದು ಭಾರತದಲ್ಲಿ ಭಾಗಶಃ ಗೋಚರವಾಗಲಿದೆ. ವರ್ಷದ ಅಂತ್ಯದಲ್ಲಿ ಉಂಟಾಗುವ ಸೂರ್ಯಗ್ರಹಣ ವಿಶಿಷ್ಟವೂ ಆಗಿದೆ. ಏಕೆಂದರೆ ಸುದೀರ್ಘ ಕಾಲ ಸೂರ್ಯನನ್ನು ಚಂದ್ರ ಆವರಿಸಿಕೊಳ್ಳಲಿದೆ. ಹೀಗಾಗಿ ಅದರ ಪರಿಣಾಮ ಕೂಡ ಹೆಚ್ಚು ಅವಧಿಯವರೆಗೆ ಇರುತ್ತದೆ.
ಭಾರತವಲ್ಲದೆ, ಸೌದಿ ಅರೇಬಿಯಾ, ಕತಾರ್, ಸುಮಾತ್ರಾ, ಮಲೇಷ್ಯಾ, ಒಮನ್, ಸಿಂಗಪುರ, ಉತ್ತರ ಮರೀನಾ ಐಲ್ಯಾಂಡ್ಸ್, ಶ್ರೀಲಂಕಾ ಮತ್ತು ಬೋರ್ನಿಯೋಗಳಿಗೆ ಸೂರ್ಯಗ್ರಹಣ ಗೋಚರವಾಗಲಿದೆ. ಭಾರತದ ಎಲ್ಲ ಸ್ಥಳಗಳಲ್ಲಿಯೂ ಸಂಪೂರ್ಣ ಗ್ರಹಣ ಕಾಣಿಸಿಕೊಳ್ಳುವುದಿಲ್ಲ. ತಮಿಳುನಾಡಿನ ಮದುರೆ, ಕೊಯಮತ್ತೂರು, ಮತ್ತು ಕೇರಳದ ಚೆರುವತೂರು, ಕೋಯಿಕ್ಕೋಡ್‍ನಲ್ಲಿ ಮಾತ್ರ ಸಂಪೂರ್ಣ ಸೂರ್ಯಗ್ರಹಣ ನೋಡಲು ಸಾಧ್ಯ. ಉಳಿದ ಭಾಗಗಳಲ್ಲಿ ಭಾಗಶಃ ಸೂರ್ಯಗ್ರಹಣ ಕಾಣಿಸಲಿದೆ.
ಗ್ರಹಣದ ಸಮಯ ಯಾವುದು:
ಭಾರತದಲ್ಲಿ ಡಿ. 26ರ ಬೆಳಿಗ್ಗೆ 8.17ಕ್ಕೆ ಸೂರ್ಯಗ್ರಹಣ ಆರಂಭವಾಗಲಿದೆ. ಬೆಳಿಗ್ಗೆ 10.57ಕ್ಕೆ ಅದು ಪೂರ್ಣಗೊಳ್ಳಲಿದೆ. ಈ ನಡುವೆ ಬೆಳಿಗ್ಗೆ 9.31ಕ್ಕೆ ಪೂರ್ಣ ಪ್ರಮಾಣದಲ್ಲಿ ಸೂರ್ಯಗ್ರಹಣ ಗೋಚರವಾಗಲಿದೆ. 2019ರ ಕೊನೆಯ ಸೂರ್ಯಗ್ರಹಣ ಒಟ್ಟು 2 ಗಂಟೆ 40 ನಿಮಿಷ ಮತ್ತು 6 ಸೆಕೆಂಡ್‍ಗಳವರೆಗೆ ಸಂಭವಿಸಲಿದೆ ಎಂದು ವಿವಿಧ ವೆಬ್‍ಸೈಟ್‍ಗಳು ತಿಳಿಸಿವೆ. ಈ ಅವಧಿಯಲ್ಲಿ ಸೂರ್ಯನನ್ನು ಚಂದ್ರ ಶೇ 91.93ರಷ್ಟು ಆವರಿಸಿಕೊಳ್ಳಲಿದೆ.
ಇದು ಬೆಂಕಿಯುಂಗುರ ಉಂಗುರಾಕಾರದಲ್ಲಿ ಸೂರ್ಯನನ್ನು ಗೋಚರಿಸುವಂತೆ ಮಾಡುವ ಗ್ರಹಣವನ್ನು 'ರಿಂಗ್ ಆಫ್ ಫೈರ್' ಎಂದೂ ಕರೆಯಲಾಗುತ್ತದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಆಗ ಸೂರ್ಯನ ಸುತ್ತಲೂ ಉಂಗುರಾಕಾರದ ಬೆಳಕು ಕಾಣಿಸುತ್ತದೆ. ಸೂರ್ಯಗ್ರಹಣ ಆಗಾಗ್ಗೆ ಸಂಭವಿಸುತ್ತಿದ್ದರೂ, ಸೂರ್ಯನಿಗಿಂತ ತುಸು ಸಣ್ಣನೆ ಎದುರಾಗುವ ಚಂದ್ರನ ಸುತ್ತಲಿನಿಂದ ಬರುವ ಬೆಳಕು ಉಂಗುರವನ್ನು ಸೃಷ್ಟಿಸುತ್ತದೆ. ಈ ವಿದ್ಯಮಾನವನ್ನು ಬರಿಗಣ್ಣಿನಿಂದ ವೀಕ್ಷಿಸುವುದು ಅಪಾಯಕಾರಿ ಎಂದು ಎಚ್ಚರಿಕೆ ನೀಡಲಾಗಿದೆ.
ಚೆರುವತೂರು ಸೂಕ್ತ ಸ್ಥಳ:
ಭಾರತದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಕಾಸರಗೋಡು ಜಿಲ್ಲೆಯ ಚೆರುವತೂರು ಸೂಕ್ತ ಸ್ಥಳವಾಗಿದೆ. ಸೂರ್ಯಗ್ರಹಣ ವೀಕ್ಷಣೆಗೆ ಪ್ರಶಸ್ತವಾದ ಜಗತ್ತಿನ ಕೆಲವು ಸ್ಥಳಗಳಲ್ಲಿ ಚೆರುವತೂರು ಕೂಡ ಒಂದು. ಕೇರಳದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಸನ್ನಿಧಿಗೆ ನಿತ್ಯವೂ ಭಕ್ತರು ಆಗಮಿಸುತ್ತಿದ್ದಾರೆ. ಸೂರ್ಯಗ್ರಹಣದ ಕಾರಣ ದೇವಸ್ಥಾನವನ್ನು ಡಿ. 26ರಂದು ನಾಲ್ಕು ಗಂಟೆಗಳ ಕಾಲ ಮುಚ್ಚಲಾಗುತ್ತದೆ.
72 ವರ್ಷಗಳ ಬಳಿಕ ಮೊದಲ ಬಾರಿ ಗೋಚರ:
ಯುಎಇದಲ್ಲಿ 172 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಉಂಗುರಾಕಾರದ ಸೂರ್ಯಗ್ರಹಣ ಕಾಣಿಸಲಿದೆ. ಇದಕ್ಕೂ ಮೊದಲು 1847ರಲ್ಲಿ ಈ ರೀತಿಯ ಸೂರ್ಯಗ್ರಹಣ ಕಾಣಿಸಿತ್ತು. ಈ ಬಾರಿ ಸಂಪೂರ್ಣ ಸೂರ್ಯಗ್ರಹಣವು ಅಬುದಾಬಿಯ ಘಾರ್ಬಿಯಾ ಅಥವಾ ಲಿವಾ ಪ್ರದೇಶದಲ್ಲಿ ಮಾತ್ರ ಕಾಣಿಸಲಿದೆ. ಹರಿಯಾಣದ ಕುರುಕ್ಷೇತ್ರದಲ್ಲಿ ಹತ್ತು ವರ್ಷದ ಬಳಿಕ ಗ್ರಹಣ ಗೋಚರವಾಗಲಿದೆ.
ಈ ಬಗ್ಗೆ ಒಂದಷ್ಟು ಇತರ ಮಾಹಿತಿಯ ಚಿತ್ರಗಳೂ ಇಲ್ಲಿವೆ............