ಮಂಜೇಶ್ವರ: ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ಡಿ. 27 ಹಾಗೂ 28 ರಂದು ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ವರ್ಕಾಡಿ ಗ್ರಾಮೋತ್ಸವ 2019 ರ ಕಚೇರಿ ಉದ್ಘಾಟನೆ ಹಾಗೂ ಲೋಗೋ ಅನಾವರಣ ಶುಕ್ರವಾರ ನಡೆಯಿತು.
ವರ್ಕಾಡಿ ಗ್ರಾ. ಪಂ. ಅಂಗಣದಲ್ಲಿ ನಡೆದ ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಅವರು ಕಚೇರಿ ಉದ್ಘಾಟಿಸಿ ಲೋಗೋ ಅನಾವರಣಗೊಳಿಸಿದರು. ಬ್ಲಾಕ್ ಪಂ. ಉಪಾಧ್ಯಕ್ಷೆ ಮಮತಾ ದಿವಾಕರ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳು ಹಾಗೂ ಸ್ಥಳೀಯರು ಸಹಿತ ನೂರಾರು ಮಂದಿ ಪಾಲ್ಗೊಂಡರು.
ಕೇರಳದ ಅತೀ ಉತ್ತರ ತುದಿಯಲ್ಲಿರುವ ವರ್ಕಾಡಿ ಗ್ರಾ. ಪಂ.ಗೊಳಪಡುವ ಗ್ರಾಮಗಳು ವೈವಿಧ್ಯಮಯ ಕಲೆ ಸಂಸ್ಕøತಿ ಭಾಷೆಗಳ ತವರೂರು ಆಗಿರುವುದು ವಿಶೇಷತೆಯಾಗಿದೆ. ಪರಿಶಿಷ್ಟ ಜಾತಿ, ವರ್ಗಗಳ ಜನರೂ ಸಹಿತ ವಿವಿಧ ಧರ್ಮದ ಜನರನ್ನು ಒಟ್ಟುಗೂಡಿಸಿ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಡಿ. 27 ರಂದು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಮಂಜೇಶ್ವರ ಶಾಸಕ ಎಂ. ಸಿ ಖಮರುದ್ದೀನ್ ಅಧ್ಯಕ್ಷತೆ ವಹಿಸುವರು. ಡಿ. 28 ರಂದು ಕೇಂದ್ರ ಅನಿವಾಸಿ ಖಾತೆ ಸಚಿವ ವಿ. ಮುರಳೀಧರನ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸುವರು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು.