ಕಾಸರಗೋಡು: ಕಾಸರಗೋಡು ಜಿಲ್ಲಾ ಬೀಚ್ ಗೇಮ್ಸ್ ಡಿ.24,25ರಂದು ಪಳ್ಳಿಕ್ಕರೆ ಬೀಚ್ ನಲ್ಲಿ ನಡೆಯಲಿದೆ. ವಾಲಿಬಾಲ್, ಫುಟ್ ಬಾಲ್, ಹಗ್ಗಜಗ್ಗಾಟ, ಕಬಡ್ಡಿ ಎಂಬ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದಿರುವ ಪುರುಷ-ಮಹಿಳಾ ತಂಡಗಳು ಸ್ಪರ್ಧೆಗೆ ಅರ್ಹರಾಗಿದ್ದಾರೆ. ಜೊತೆಗೆ ಮೀನುಗಾರರ ಪುರುಷ ವಿಭಾಗಕ್ಕಾಗಿ ಹಗ್ಗ-ಜಗ್ಗಾಟ, ವಾಲಿಬಾಲ್ ಸ್ಪರ್ಧೆಗಳು ನಡೆಯಲಿವೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಪದಕ ನೀಡಲಾಗುವುದು.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಪಸಮಿತಿಗಳ ರಚನೆ ಸಭೆ ಜರುಗಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಅಜಾನೂರು ಗ್ರಾಮಪಂಚಾಯತ್ ಅಧ್ಯಕ್ಷ ಪಿ.ದಾಮೋದರನ್ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಮಂಡಳಿ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಹಬೀಬ್ ರಹಮಾನ್ ಪ್ರಧಾನ ಭಾಷಣ ಮಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಪಳ್ಳಂ ನಾರಾಯಣನ್, ಟಿ.ವಿ.ಬಾಲನ್, ಟಿ.ವಿ.ಕೃಷ್ಣನ್, ವಿ.ಪಿ.ಪಿ.ವಿಜಯ ಮೋಹನನ್, ಅನಿಲ್ ಬಂಗಳಂ ಉಪಸ್ಥಿತರಿದ್ದರು. ಮಂಡಳಿ ಕಾರ್ಯದರ್ಶಿ ಡಾ.ನಝೀಮುದ್ದೀನ್ ಸ್ವಾಗತಿಸಿದರು. ಉಪಾಧ್ಯಕ್ಷ ಪಿ.ಪಿ.ಅಶೋಕನ್ ಮಾಸ್ತರ್ ವಂದಿಸಿದರು.