ಗುವಾಹತಿ: ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲೂ ಅನುಮೋದನೆ ದೊರೆಯುತ್ತಿದ್ದಂತೆ ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ಹಿಂಸಾಚಾರಕ್ಕೆ ತಿರುಗಿದೆ.
ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಕಫ್ರ್ಯೂ ಜಾರಿಗೊಳಿಸಲಾಗಿದ್ದು, ಕಫ್ರ್ಯೂ ಮಧ್ಯೆಯೂ ಗುವಾಹತಿಯಲ್ಲಿ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ ಉಗ್ರ ಪ್ರತಿಭಟನೆ ನಡೆಸುತ್ತಿದೆ.
ತಿನ್ಸುಕಿಯಾ ಪಟ್ಟಣದಲ್ಲಿ ಪ್ರತಿಭಟನಾಕಾರರು ಅಂಗಡಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಮೂವರು ವ್ಯಕ್ತಿ ಮೃತಪಟ್ಟಿದ್ದಾರೆ. ಪೌರತ್ವ (ತಿದ್ದುಪಡಿ) ಮಸೂದೆಯು ಈಶಾನ್ಯದಲ್ಲಿ ಹಿಂಸೆಗೆ ಕಾರಣವಾಗಿದ್ದು, ಬೃಹತ್ ಪ್ರತಿಭಟನೆಗೆ ಯಾವುದೇ ಪಕ್ಷ ಕರೆ ನೀಡಿರಲಿಲ್ಲವಾದರೂ, ಸಾವಿರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಸ್ವಯಂ ಪ್ರೇರಣೆಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಅಸ್ಸಾಂ ರಾಜಧಾನಿ ಗುವಾಹತಿ, ದಿಬ್ರುಗಡ, ಜೊಹ್ರತ್‍ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ ನೂರಾರು ಜನರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಕಿಚ್ಚು ತೀವ್ರಗೊಂಡಿದ್ದರಿಂದ ಅಸ್ಸಾಂನಲ್ಲಿ ಕಫ್ರ್ಯೂ ವಿಧಿಸಲಾಗಿದೆ. ಗುವಾಹತಿಯಲ್ಲಿರುವ ಸಚಿವಾಲಯದ ಎದುರು ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ ಹಲವು ಜನರು ಹಾಗೂ ಪತ್ರಕರ್ತರಿಗೆ ಗಾಯಗಳಾಗಿವೆ.
ಅಸ್ಸಾಂ, ತ್ರಿಪುರಾದಲ್ಲಿ ಸೇನೆ ನಿಯೋಜನೆ:
ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ತಾಳಿದ್ದು, ಹಿಂಸಾಪೀಡಿತ ತ್ರಿಪುರಾ ಹಾಗೂ ಅಸ್ಸಾಂನಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ 5000 ಅರೆಸೇನಾಪಡೆ ಸಿಬ್ಬಂದಿಯನ್ನು ವಿಶೇಷ ವಿಮಾನಗಳ ಮೂಲಕ ಕಳುಹಿಸಿಕೊಡಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಭದ್ರತೆಗೆ ನಿಯೋಜಿಸಿದ್ದ ಸಿಬ್ಬಂದಿ ಪೈಕಿ 2 ಸಾವಿರ ಯೋಧರು ಹಾಗೂ ದೇಶದ ವಿವಿಧ ಭಾಗಗಳಿಂದ 3 ಸಾವಿರ ಯೋಧರನ್ನು ಕರೆಯಿಸಿಕೊಂಡು, ಈಶಾನ್ಯ ರಾಜ್ಯಗಳಿಗೆ ರವಾನಿಸಲಾಗಿದೆ. ಸಿಆರ್‍ಪಿಎಫ್, ಬಿಎಸ್‍ಎಫ್ ಹಾಗೂ ಎಸ್‍ಎಸ್‍ಬಿ ಯೋಧರು ಈ ತಂಡಗಳಲ್ಲಿದ್ದಾರೆ. ತ್ರಿಪುರಾದಲ್ಲಿ ಸೇನಾ ಕಣ್ಗಾವಲು ಹಾಕಲಾಗಿದ್ದು, ಸುಮಾರು 15 ಸಾವಿರಕ್ಕೂ ಅಧಿಕ ಸೈನಿಕರು ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ.