ಕಾಸದರಗೋಡು: ವಿದ್ಯಾನಗರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಪ್ರಾಯೋಜಕತ್ವದಲ್ಲಿ, ಅಪೂರ್ವ ಕಲಾವಿದರು ಕಾಸರಗೋಡು ಸಂಸ್ಥೆಯ ಸಹಯೋಗದೊಂದಿಗೆ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಕಾರದೊಂದಿಗೆ ದಶಂಬರ 31 ಮಂಗಳವಾರ ಬೆಳಗ್ಗೆ 10 ಗಂಟೆಗೆ ಕಾಸರಗೋಡು ಸರಕಾರಿ ಕಾಲೇಜಿನ ವಿಚಾರಗೋಷ್ಠಿ ಸಭಾಂಗಣದಲ್ಲಿ ಕನ್ನಡ ಚಿಂತನೆ ಕಾರ್ಯಕ್ರಮದ ಉದ್ಘಾಟನೆ, ಅನುಪಮಾ ಪ್ರಸಾದ್ ಅವರ ಕಾದಂಬರಿ, 'ಪಕ್ಕಿಹಳ್ಳದ ಹಾದಿಗುಂಟ' ಕೃತಿ ಬಿಡುಗಡೆ, ವಿಶೇಷೋಪನ್ಯಾಸ ಮತ್ತು ಕಾವ್ಯ ವಾಚನ ವ್ಯಾಖ್ಯಾನ ನಡೆಯಲಿದೆ.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪೆÇ್ರ. ಎನ್ ಎಂ. ತಳವಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಅನುಪಮಾ ಪ್ರಸಾದ್ ಅವರ ಕಾದಂಬರಿ 'ಪಕ್ಕಿಹಳ್ಳದ ಹಾದಿಗುಂಟ' ಕೃತಿ ಬಿಡುಗಡೆ ಮಾಡುವರು. ಬಳಿಕ ಅವರು 'ಅಭಿಜಾತ ಕನ್ನಡ ಸಾಹಿತ್ಯ - ಸಂಶೋಧನೆಯ ಸಾಧ್ಯತೆಗಳು' ಎಂಬ ವಿಷಯದ ಬಗ್ಗೆ ವಿಶೇಷೋಪನ್ಯಾಸ ನೀಡುವರು. ಹೊಳೆನರಸೀಪುರ ಮಹಿಳಾ ಸರಕಾರಿ ಗೃಹ ವಿಜ್ಞಾನ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಿಕೆ ಡಾ. ಭಾರತೀ ದೇವಿ ಪಿ ಯವರು 'ಪಕ್ಕಿ ಹಳ್ಳದ ಹಾದಿಗುಂಟ' ಕೃತಿ ಪರಿಚಯ ಮಾಡುವರು. ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಎ.ಎಲ್. ಅನಂತಪದ್ಮನಾಭ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಅನುಪಮಾ ಪ್ರಸಾದ್, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಶುಭಾಶಂಸನೆ ಮಾಡುವರು. ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್, ಅಪೂರ್ವ ಕಲಾವಿದರು ಅಧ್ಯಕ್ಷ ಉಮೇಶ್ ಎಂ ಸಾಲಿಯಾನ್, ಕಾರ್ಯದರ್ಶಿ ಡಾ. ರತ್ನಾಕರ ಮಲ್ಲಮೂಲೆ, ಸಹಾಯಕ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಉಪಸ್ಥಿತರಿರುವರು.
ಮಧಾಹ್ನ ಬಳಿಕ ಅಭಿಜಾತ ಕನ್ನಡ - ಕಾವ್ಯವಾಚನ ಮತ್ತು ವ್ಯಾಖ್ಯಾನ ನಡೆಯಲಿದೆ. ತಲಪಾಡಿ ಶಾರದಾ ವಿದ್ಯಾನಿಕೇತನ ಪಿ.ಯು. ಕಾಲೇಜಿನ ಉಪನ್ಯಾಸಕ ಸುರೇಶ್ ರಾವ್ ಅತ್ತೂರ್ ಹಾಗೂ ಕಾಸರಗೋಡು ಸರಕಾರಿ ಕಾಲೇಜಿನ ಪ್ರಥಮ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿನಿ ಶ್ರದ್ಧಾ ಭಟ್ ನಾಯರ್ಪಳ್ಳ ವಾಚನ - ವ್ಯಾಖ್ಯಾನ ನಡೆಸಿಕೊಡುವರು.
ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಬಂಧಪಟ್ಟವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.