ಕುಂಬಳೆ: ನಾಯ್ಕಾಪು ಶ್ರೀ ಶಾಸ್ತಾಬನ ಪರಿಸರದಲ್ಲಿ ನಿರಂತರ ಏಳು ದಿನಗಳ ಕಾಲ ಅಖಂಡ ಭಜನಾ ಸಪ್ತಾಹವು ಡಿ.7ರಿಂದ 14 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಡಿ.7 ರಂದು ಸೂರ್ಯೋದಯಕ್ಕೆ ಗಣಪತಿ ಹವನ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅಪರಾಹ್ನ 3 ಗಂಟೆಗೆ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ, 3.30ಕ್ಕೆ ನಡೆಯುವ ಧಾರ್ಮಿಕ ಸಭೆಯನ್ನು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟಿಸುವರು.
ಅಖಂಡ ಭಜನಾ ಸಪ್ತಾಹದ ಅಧ್ಯಕ್ಷ ಕಿಶನ್ ಕುಮಾರ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಮುಖ್ಯ ಅತಿಥಿಯಾಗಿ ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಭಾಗವಹಿಸುವರು. ಅಲ್ಲದೆ ವಿವಿಧ ವಲಯಗಳ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಸಭೆಯಲ್ಲಿ ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ ಹಾಗೂ ಮಹಾಲಿಂಗ ಶೆಟ್ಟಿ ಅವರಿಗೆ ಗೌರವಾರ್ಪಣೆ ನೀಡಿ ಅಭಿನಂದಿಸಲಾಗುವುದು.
ಅತಿಥಿಗಳಾಗಿ ನ್ಯಾಯವಾದಿ ಕೆ.ಸದಾನಂದ ಕಾಮತ್, ಶಿವರಾಮ ಕಡಪ್ಪುರ, ಕುಂಬಳೆ ಇನ್‍ಸ್ಪೆಕ್ಟರ್ ಆಫ್ ಪೆÇಲೀಸ್ ಜೀವನ್ ವಳಿಯವಳಪ್ಪಿಲ್, ಕುಂಬಳೆ ಗ್ರಾಮ ಪಂಚಾಯತಿ ಸದಸ್ಯರಾದ ಕೆ.ರಮೇಶ್ ಭಟ್, ಕೆ.ಸುಧಾಕರ ಕಾಮತ್, ಹರೀಶ್ ಗಟ್ಟಿ, ಕೆ.ಸುಜಿತ್ ರೈ, ಪುಷ್ಪಲತಾ, ಪ್ರೇಮಲತಾ ಭಾಗವಹಿಸುವರು. ಸಂಜೆ ಸೂರ್ಯಾಸ್ತಮಾನಕ್ಕೆ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯರು ದೀಪ ಪ್ರಜ್ವಲನೆಗೊಳಿಸಿ ಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ ನೀಡುವರು.