ಬದಿಯಡ್ಕ/ಕುಂಬಳೆ: ಭಾನುವಾರ ಅಪರಾಹ್ನ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಅನಿರೀಕ್ಷಿತವಾಗಿ ಭಾರೀ ಗುಡುಗು-ಸಿಡಿಲು ಸಹಿತ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.
ಭಾನುವಾರ ಅಪರಾಹ್ನ 2 ರ ಆಸುಪಾಸು ಮಳೆ ಆರಂಭಗೊಂಡಿತ್ತು. ಭಾರೀ ತೀವ್ರತೆಯ ಮಳೆಯಿಂದ ಜನರು ಕಂಗಾಲಾದರು. ಸಂಜೆ 5ರ ವರೆಗೂ ಮಳೆ ಸುರಿದಿದ್ದು, ಮಳೆಯಿಂದ ಹಲವೆಡೆ ನೀರು ಸಂಚರಿಸಲು ಸಾಧ್ಯವಾಗದೆ ಕಟ್ಟಿನಿಂತಿರುವುದು ಕಂಡುಬಂದಿದೆ. ಮೂರರ ಸುಮಾರಿಗೆ ಭಾರೀ ಶಬ್ದಗಳೊಂದಿಗೆ ಸಿಡಿಲು ಆರ್ಭಟಿಸಿದ್ದು, ಜನರು ಭಯಭೀತರಾದರು. ಇಂದು(ಸೋಮವಾರ)ಷಷ್ಠಿ ಉತ್ಸವದ ಹಿನ್ನೆಲೆಯಲ್ಲಿ ಹಲವು ದೇವಾಲುಗಳಲ್ಲಿ ಉತ್ಸವ ನಡೆಯಲಿದ್ದು, ಅನಿರೀಕ್ಷಿತ ಮಳೆ ಆತಂಕಕ್ಕೆ ಕಾರಣವಾಯಿತು. ಬದಿಯಡ್ಕ, ನೀರ್ಚಾಲು, ಬೇಳ, ಮವ್ವಾರು, ಅಡೂರು, ಆದೂರು, ಪೆರ್ಲ,ಕುಂಬಳೆ, ಮಂಜೇಶ್ವರ ಪ್ರದೇಶಗಳ ಅಡಿಕೆ ಕೃಷಿಕರು ಮಳೆಯ ಕಾರಣ ಭಾರೀ ನಷ್ಟ ಸಂಭವಿಸಲು ಕಾರಣವಾಗಲಿದೆ ಎಂದು ಅಂದಾಜಿಸಿದ್ದಾರೆ.ಹಲವರ ಮನೆಯಂಗಳಲ್ಲಿ ಮೊದಲ ಕೊಯ್ಲಿನ ಅಡಿಕೆ ಒಣಗುತ್ತಿರುವುದು, ಅನಿರೀಕ್ಷಿತ ಮಳೆಯ ಕಾರಣ ವ್ಯರ್ಥಗೊಂಡಿರುವುದು ನಿರಾಶೆಗೆ ಕಾರಣವಾಗಿದೆ.
ಹವಾಮಾನ ಇಲಾಖೆ ಮಂಗಳವಾರದ ವೇಳೆಗೆ ಮಳೆಯ ಸಾಧ್ಯತೆಯ ಬಗ್ಗೆ ಮುನ್ಸೂಚನೆ ನೀಡಿತ್ತು.