ಬದಿಯಡ್ಕ: ಗಣಿತ ಎನ್ನುವುದು ಪ್ರತಿಯೊಬ್ಬನಿಗೂ ಅತೀ ಅವಶ್ಯಕವಾಗಿದೆ. ವಿದ್ಯಾರ್ಥಿಗಳಿಗೆ ಗಣಿತ ಪಾಠಮಾಡುವ ಅಧ್ಯಾಪಕರಿಗಾಗಿ ಹಮ್ಮಿಕೊಳ್ಳಲಾದ ಎರಡು ದಿನಗಳ ಶಿಬಿರವು ಪ್ರಯೋಜನಪ್ರದವಾಗಲಿ ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಬದಿಯಡ್ಕದಲ್ಲಿರುವ ಕುಂಬಳೆ ಉಪಜಿಲ್ಲಾ ಬ್ಲಾಕ್ ಸಂಪನ್ಮೂಲ ಕೇಂದ್ರ(ಬಿಆರ್‍ಸಿ)ದಲ್ಲಿ ಗಣಿತ ಅಧ್ಯಾಪಕರಿಗಾಗಿ ಹಮ್ಮಿಕೊಂಡ ಎರಡು ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಪಂಚಾಯಿತಿಯು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಕಾರ್ಯಯೋಜನೆಗಳನ್ನು ರೂಪಿಸುತ್ತಿದೆ. ವಿದ್ಯಾಭ್ಯಾಸದಿಂದ ಯಾರೂ ದೂರುಉಳಿಯಬಾರದು ಎಂದರು. ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಜಿಲ್ಲಾ ಪ್ರೋಗ್ರಾಂ ಆಫೀಸರ್ ನಾರಾಯಣ ಮಾತನಾಡಿ ಓರ್ವ ವಿದ್ಯಾರ್ಥಿಯ ಭವಿಷ್ಯತ್ತಿಗೆ ಗಣಿತವು ಪ್ರಧಾನವಾಗಿದೆ. ಆತ ಯಾವುದೇ ಕ್ಷೇತ್ರಕ್ಕೆ ಕಾಲಿಡುವುದಿದ್ದರೂ ಗಣಿತವು ಬೇಕು ಎಂಬುದನ್ನು ನಾವು ಮನಗಾಣಬೇಕು ಎಂದು ತಿಳಿಸಿದರು. ಬಿಪಿಒ ಕುಂಞÂಕೃಷ್ಣನ್ ಎನ್.ವಿ. ಉಪಸ್ಥಿತರಿದ್ದರು. ಉಪಜಿಲ್ಲೆಯ ವಿವಿಧ ಶಾಲೆಗಳ ಅಧ್ಯಾಪಕರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.