ಕಾಸರಗೋಡು: ಜಿಲ್ಲೆಯ ವಿವಿಧ ಹೈಸ್ಕೂಲ್‍ಗಳಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಅರಿಯದ ಮಲಯಾಳ ಅಧ್ಯಾಪಕರ ನೇಮಕಾತಿಯಲ್ಲಿ ಭಾರೀ ಅವ್ಯವಹಾರ ನಡೆದಿದೆಯೆಂದು, ಈ ಕುರಿತು ಸಮಗ್ರವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಹೋರಾಟ ಸಮಿತಿಯ ಸಭೆಯಲ್ಲಿ ಆಗ್ರಹಿಸಿತು.
ಗಣಿತ ಹಾಗು ಸಮಾಜ ವಿಜ್ಞಾನ ಮೊದಲಾದ ಪಠ್ಯಗಳಿಗೆ ಬೋ„ಸಲು ಅನರ್ಹರನ್ನು ನೇಮಕಾತಿಗೊಳಿಸಿದ ವಿರುದ್ಧ ಆಯಾ ಶಾಲೆಯ ಕನ್ನಡ ವಿದ್ಯಾರ್ಥಿಗಳು, ರಕ್ಷಕರು, ಕನ್ನಡ ಜನಪ್ರತಿನಿ„ಗಳು, ಭಾಷಾಭಿಮಾನಿಗಳು ತೀವ್ರವಾದ ಪ್ರತಿಭಟನೆಯನ್ನು ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಸಿದ ಫಲವಾಗಿ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಳ್ಳಲಾಗಿದೆ. ಅದೇ ರೀತಿ ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿದೆ.
ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಬೇಕಾದ ಅಗತ್ಯವಿದೆ. ಸರಕಾರ ಕಾನೂನು ತಿದ್ದುಪಡಿಯ ಮೂಲಕ ಇಂತಹ ರ್ಯಾಂಕ್ ಪಟ್ಟಿಯಲ್ಲಿರುವ ಅಧ್ಯಾಪಕರನ್ನು ಇತರ ಇಲಾಖೆಗೆ ನೇಮಕಾತಿ ಮಾಡುವ ಮೂಲಕ ಅಪಾರ ಸಂಖ್ಯೆಯ ಕನ್ನಡ ವಿದ್ಯಾರ್ಥಿಗಳಿಗೆ ನ್ಯಾಯ ದೊರಕುವ ಸಾಧ್ಯತೆ ಇದೆ. ಈ ಕುರಿತು ಡಿಡಿಇ ಯವರು ಅಂತಹ ಅಧ್ಯಾಪಕರಿಗೆ ಕನ್ನಡದಲ್ಲಿ ಪಾಠ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಸರಕಾರಕ್ಕೆ ವರದಿಯನ್ನು ಸಲ್ಲಿಸಬೇಕಾಗಿದೆ.
ಈ ಕುರಿತು ಕನ್ನಡ ಹೋರಾಟ ಸಮಿತಿಯ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿ ಡಿಡಿಇ ಅವರನ್ನು ನಿಯೋಗದೊಂದಿಗೆ ಭೇಟಿಯಾಗಿ ವಿಷಯದ ಗಂಭೀರತೆಯನ್ನು ಮನವರಿಕೆ ಮಾಡುವ ಮೂಲಕ ವರದಿ ನೀಡುವಂತೆ ಕ್ರಮಕೈಗೊಳ್ಳಲು ತೀರ್ಮಾನಿಸಲಾಯಿತು. ಧನಾತ್ಮಕವಾದ ತೀರ್ಮಾನ ಕೈಗೊಳ್ಳದಿದ್ದರೆ ಡಿಡಿಇ ಆಫೀಸಿನ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಬ್ಯಾಂಕ್ ರಸ್ತೆಯ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನಲ್ಲಿ ಸೇರಿದ ಸಭೆಯಲ್ಲಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ವಿಷಯವನ್ನು ಮಂಡನೆ ಮಾಡಿದರು. ಟಿ.ಶಂಕರನಾರಾಯಣ ಭಟ್, ರಾಮ ಪ್ರಸಾದ್, ಕೆ.ವಿಶ್ವನಾಥ ರಾವ್, ವಾಸುದೇವ ಕಾಸರಗೋಡು, ತಾರಾನಾಥ ಮಧೂರು, ವಾಸುದೇವ ಬಟ್ಟತ್ತೂರು, ನವೀನಚಂದ್ರ ಮಾನ್ಯ, ಹರೀಶ್ಚಂದ್ರ, ಗುರುಪ್ರಸಾದ್ ಕೊಟೆಕಣಿ, ಸತೀಶ್ ಮಾಸ್ಟರ್ ಕೂಡ್ಲು, ದಿನೇಶ್ ಚೆರುಗೋಳಿ, ರಜನಿ ಕುಮಾರಿ, ಚಂದ್ರಾವತಿ, ಸೌಮ್ಯಾ, ಕೀರ್ತಿ, ದಿವ್ಯಗಂಗಾ, ಶಾಂತ ಕುಮಾರಿ, ನಿರ್ಮಲ ಕುದ್ರೆಪ್ಪಾಡಿ ಮೊದಲಾದವರು ಮಾತನಾಡಿದರು.