ಮಂಜೇಶ್ವರ: ಕುಂಜತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ನಡೆಯುವ ಧಾರ್ಮಿಕ ಸಭೆಗಳಿಗೆ ಭಾನುವಾರ ಸಂಜೆ ಚಾಲನೆ ನೀಡಲಾಯಿತು.
ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿದ್ದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನಗೈದು, ಅಂತರಂಗದೊಳಗೆ ದೇವರನ್ನು ಕಾಣುವ ಪ್ರಯತ್ನಗಳು ಹಠ ಪ್ರಯತ್ನದಿಂದ ಆಗಬೇಕು. ಅಂತರಂಗ ಬೆಳಗದೆ ಬದುಕು ಹೊಳೆಯದು ಎಂದು ತಿಳಿಸಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀಶೃಂಗೇರಿ ಮಠದ ಕೋಟೆಕಾರ್ ಶಾಖೆಯ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಅವರು ಮಾತನಾಡಿ, ಪರೋಪಕಾರವು ಮಾನವ ಜೀವನದ ಸಾಥ್ರ್ಯಕ್ಯವಾಗಿರುತ್ತದೆ. ಕೈಲಾದ ನೆರವು ನೀಡುವಲ್ಲಿ ಹಿಂದೇಟು ಹಾಕಬಾರದು. ಜೊತೆಗೆ ಹಿಂಸಾರಹಿತವಾಗಿರುವುದೇ ಧರ್ಮದ ಮೂಲ ಸಾರ ಎಂದು ಅವರು ತಿಳಿಸಿದರು.
ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಚಕ್ರತೀರ್ಥ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಖ್ಯಾತ ನ್ಯಾಯವಾದಿ ಎಸ್.ಪಿ.ಚಂಗಪ್ಪ, ಮುಂಬಯಿಯ ನಿವೃತ್ತ ಶಿಕ್ಷಕಿ ಯಶೋಧ ಬಟ್ಯಪ್ಪಾಡಿ, ಬಿಜೆಪಿ ಕೇರಳ ಪ್ರಾಂತ್ಯ ಒಬಿಸಿ ಮೋರ್ಚಾದ ನೇತಾರ ನ್ಯಾಯವಾದಿ ನವೀನ್ ರಾಜ್ ಕೆ.ಜೆ, ಕುಂಜತ್ತೂರು ಶ್ರೀಮಹಾಲಿಂಗೇಶ್ವರ ವಿದ್ಯಾನಿಕೇತನದ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದು ಶುಭಹಾರೈಸಿದರು. ಸಮಾರಂಭದಲ್ಲಿ ಖ್ಯಾತ ಉದ್ಯಮಿ ಪ್ರಶಾಂತ್ ಶೇಟ್ ಅವರನ್ನು ಸನ್ಮಾನಿಸಲಾಯಿತು. ವ್ಯವಸ್ಥಾಪನಾ ಸಮಿತಿ ಸದಸ್ಯ ಹರೀಶ್ ಶೆಟ್ಟಿ ಮಾಡ ಸ್ವಾಗತಿಸಿ, ವಂದಿಸಿದರು. ದಾಮೋದರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಾಟ್ಯನಿಲಯಂ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಅವರ ಶಿಷ್ಯವೃಂದದವರಿಂದ ನೃತ್ಯೋಪಾಸನಂ 2019 ನೃತ್ಯ ಸಂಗಮ ಸಾಂಸ್ಕøತಿಕ ವೈವಿದ್ಯ ನಡೆಯಿತು.