ಬದಿಯಡ್ಕ: ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠೀ ಮಹೋತ್ಸವಕ್ಕೆ ಸೋಮವಾರ ಮಧ್ಯಾಹ್ನ ಭಕ್ತಜನ ಸಾಗರವೇ ಹರಿದುಬಂದಿತ್ತು. ವರ್ಷಂಪ್ರತಿಯಂತೆ ಷಷ್ಠೀ ಮಹೋತ್ಸವವು ವಿಜೃಂಭಣೆಯಿಂದ ಜರಗುತ್ತಿದ್ದು, ಬೆಳಿಗ್ಗೆ ಗಣಪತಿ ಹೋಮ, ವೇದಪಾರಾಯಣ, ನವಕಾಭಿಷೇಕ ಜರಗಿತು. ಮಧ್ಯಾಹ್ನ ಭಕ್ತಾದಿಗಳ ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು. 10,000ಕ್ಕೂ ಹೆಚ್ಚು ಮಂದಿ ಭೋಜನ ಪ್ರಸಾದ ಸ್ವೀಕರಿಸಿದ್ದರು.
ಸಂಜೆ ಏಣಿಯರ್ಪುನಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರದ ಆಗಮನ, ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಸಂಘದವರಿಂದ ಹುಲ್ಪೆ ಮೆರವಣಿಗೆ, ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ಉತ್ಸವ ಬಲಿ, ಬೆಡಿಸೇವೆ, ರಾಜಾಂಗಣ ಪ್ರಸಾದ ಜರಗಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಸಂಘ, ಶ್ರೀ ವೀರಾಂಜನೇಯ ಕಳರಿ ವ್ಯಾಯಾಮ ಶಾಲೆ ಏಣಿಯರ್ಪು ಇವರಿಂದ ಭಜನೆ, ನೀರ್ಚಾಲು ಪರಮೇಶ್ವರ ಆಚಾರ್ಯ ಕಲಾಸೇವಾ ಪ್ರತಿಷ್ಠಾನ ಇದರ ವತಿಯಿಂದ ಭಜನೆ ಪುರಾಣ ವಾಚನ, ಕಾಕುಂಜೆ ಸೋದರಿಯರಾದ ಡಾ. ಹೇಮಶ್ರೀ ಕಾರ್ತಿಕ್ ಮತ್ತು ಶ್ರೀವಾಣಿ ಇವರಿಂದ ಸಂಗೀತ ಸುಧಾ, ಮಧ್ಯಾಹ್ನ ಭಜನಾ ಸಾಮ್ರಾಟ್ ಮಧೂರು ತಂಡದವರಿಂದ ಭಕ್ತಿಗಾನ ಸುಧಾ, ಯಕ್ಷಭಾರತೀ ಯಕ್ಷಗಾನ ಕಲಾಸಂಘ ನೀರ್ಚಾಲು ಇವರಿಂದ ಯಕ್ಷಗಾನ ತಾಳಮದ್ದಳೆ ಜರಗಿತು. ಸಂಜೆ ನಾಟ್ಯವಿದ್ಯಾಲಯ ಕುಂಬಳೆ ಇದರ ನೃತ್ಯ ನಿರ್ದೇಶಕಿ ವಿದುಷಿ ವಿದ್ಯಾಲಕ್ಷ್ಮೀ ಬೇಳ ಇವರ ಶಿಷ್ಯೆಯರಿಂದ ನೃತ್ಯಸಂಭ್ರಮ, ರಾತ್ರಿ ಸ್ವಸ್ತಿಶ್ರೀ ಕಲಾಪ್ರತಿಷ್ಠಾನ ಎಡನಾಡು ಇವರಿಂದ ಷಣ್ಮುಕ ವಿಜಯ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಇಂದು ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯಲಿರುವುದು. ಕಾರ್ಯಕ್ರಮದ ಪೂರ್ವಭಾವಿಯಾಗಿ ಭಾನುವಾರ ಸಂಜೆ ನೀರ್ಚಾಲು ಅಶ್ವತ್ಥಕಟ್ಟೆ ಪರಿಸರದಿಂದ ಹಾಗೂ ಸೀತಾಂಗೋಳಿ ಶ್ರೀ ದೇವಿ ಭಜನಾ ಮಂದಿರದಿಂದ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.